ಸ್ಥಳಾಂತರಗೊಂಡ ಚಿತ್ತಾಪುರ ಡಿಸಿಸಿ ಬ್ಯಾಂಕ್ ಉದ್ಘಾಟನೆ, ಸಹಕಾರ ಬ್ಯಾಂಕ್ ಬೆಳವಣಿಗೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಮುಖ್ಯ: ಗೋನಾಯಕ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಹಕಾರ ಬ್ಯಾಂಕ್ ಬೆಳವಣಿಗೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಕಲಬುರ್ಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿ ಪಕ್ಕದ ಬಸುದೆ ಕಾಂಪ್ಲೆಕ್ಸ್ ನಲ್ಲಿ ಸ್ಥಳಾಂತರಗೊಂಡ ಕಲಬುರ್ಗಿ ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಚಿತ್ತಾಪುರ ಶಾಖೆಯ ಬ್ಯಾಂಕ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಹಕಾರಿಗಳ ಸಹಕಾರದಿಂದ ಸಹಕಾರಿ ಬ್ಯಾಂಕ್ ಅಭಿವೃದ್ಧಿ ಆಗಲಿದೆ. ಇದು ಜನರ ಬ್ಯಾಂಕ್ ಆಗಿದ್ದು ಜನರ ಪ್ರೀತಿ ವಿಶ್ವಾಸ ಗಳಿಸಬೇಕು ಎಂದು ಬ್ಯಾಂಕ್ ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ ಎಂದರು.
ಬ್ಯಾಂಕ್ ಸಿಬ್ಬಂದಿಗಳ ಹಾಗೂ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಈಗಿರುವ ಕಟ್ಟಡ ಡೆಮಾಲಿಶ್ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಬರುವ ಒಂದು ವರ್ಷದೊಳಗೆ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದರು.
ಬ್ಯಾಂಕ್ ಮುಖಾಂತರ ಅತಿ ಸಣ್ಣ, ಸಣ್ಣ ಮತ್ತು ದೊಡ್ಡ ರೈತರಿಗೆ ಅನೇಕ ಯೋಜನೆಗಳು ಜಾರಿಯಲ್ಲಿವೆ, ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಇದೆ, ಹೈನುಗಾರಿಕೆ, ವೇರ್ ಹೌಸ್ ನಿರ್ಮಾಣಕ್ಕೆ ಹಾಗೂ ಗೋಲ್ಡ್ ಲೋನ್ ಸೌಲಭ್ಯ ಇದೆ ಹೀಗಾಗಿ ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಈ ನಿಟ್ಟಿನಲ್ಲಿ ಬ್ಯಾಂಕ್ ನಲ್ಲಿ ಹಣಕಾಸಿನ ವ್ಯವಹಾರ ನಡೆಸಿ ಡಿಪಾಸಿಟ್ ಮಾಡಿ ನಿಮ್ಮ ಹಣಕ್ಕೆ ಭದ್ರತೆ ಹಾಗೂ ವಿಮೆ ಸೌಲಭ್ಯ ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ಹೇರೂರು ಮಾತನಾಡಿ, ಚಿತ್ತಾಪುರ ಪಟ್ಟಣದ ಡಿಸಿಸಿ ಬ್ಯಾಂಕ್ ಕಟ್ಟಡ ಬಹಳ ಹಳೆಯದಾಗಿದ್ದು ಅದನ್ನು ತೆರವುಗೊಳಿಸಿ 40 ಲಕ್ಷ ವೆಚ್ಚದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ದೊರೆತಿದೆ. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಕಾರ ಮುಖ್ಯ ಎಂದರು. ಚಿತ್ತಾಪುರ ತಾಲೂಕಿನ ರೈತರಿಗೆ 75 ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಹೊಸ ಕಟ್ಟಡ ನಿರ್ಮಾಣವಾಗುವರೆಗೂ ಖಾಸಗಿ ಕಟ್ಟಡದಲ್ಲಿ ಬ್ಯಾಂಕ್ ವ್ಯವಹಾರ ಹಾಗೂ ಕಾರ್ಯಚಟುಕೆ ನಡೆಯಲಿದೆ ಗ್ರಾಹಕರು ಸಹಕರಿಸಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಎಂ.ಡಿ ಪವನ್ ರಾಠೋಡ ಮಾತನಾಡಿ, ಚಿತ್ತಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಬ್ಯಾಂಕ್ ಗಳ ಪ್ರಗತಿ ಉತ್ತಮವಾಗಿದ್ದರೆ ಡಿಸಿಸಿ ಬ್ಯಾಂಕ್ ಉತ್ತಮವಾಗಿರಲು ಸಾಧ್ಯ ಎಂದರು. ಈಗಾಗಲೇ ಬ್ಯಾಂಕ್ ಮುಖಾಂತರ ಸಣ್ಣ ಮತ್ತು ದೊಡ್ಡ ರೈತರಿಗೆ ಅನೇಕ ಸಾಲ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಅವಂಟಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಜಿಲ್ಲಾ ಪ್ರತಿನಿಧಿ ವೀರಣ್ಣಗೌಡ ಪರಸರೆಡ್ಡಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಹಣಮಂತ ಸಂಕನೂರ, ರಾಮಲಿಂಗ ಬಾನರ್, ಜಗದೀಶ್ ಚವ್ಹಾಣ, ಕಿಶನ್ ರಾಠೋಡ, ಮೋತಿಲಾಲ್ ಚವ್ಹಾಣ, ಶಾಖಾ ವ್ಯವಸ್ಥಾಪಕ ತನುಜಾ ಬೆಳಕೇರಿ, ಕ್ಷೇತ್ರಾಧಿಕಾರಿ ಮಹೇಂದ್ರ ಕುಮಾರ್, ಸಿದ್ದಮ್ಮ ಮಲಕೂಡ, ವಿ.ಬಿ.ಸದಲಾಪೂರ, ದಯಾನಂದ ಪಾಟೀಲ, ಮಲ್ಲಿಕಾರ್ಜುನ ಯಂಕಂಚಿ ಇದ್ದರು. ಬಸವರಾಜ ಚಿನ್ನಮಳ್ಳಿ ನಿರೂಪಿಸಿದರು.