ಕೋಡ್ಲಾ ಶ್ರೀ ಸಿಮೆಂಟ್ ಕಂಪೆನಿ ವಿರುದ್ಧ ಆಕ್ರೋಶ
ಸೂಲಹಳ್ಳಿ ಗ್ರಾಮದ ಶ್ರೀ ಸಿಮೆಂಟ್ ಕಂಪನಿಯ ಡಂಪಿಂಗ್ ಯಾರ್ಡ್ ಪ್ರದೇಶದಲ್ಲಿ ಲಾರಿ ಮಾಲೀಕರಿಂದ ಧರಣಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ; ರಾಜಸ್ಥಾನದಿಂದ ಲಾರಿಗಳನ್ನು ತಂದು ಸ್ಥಳೀಯ ಲಾರಿ ಓನರ್ ಗಳಿಗೆ ಕೆಲಸ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಲಾರಿ ಮಾಲೀಕರು ಸೇಡಂ ತಾಲೂಕಿನ ಕೋಡ್ಲಾ ಶ್ರೀ ಸಿಮೆಂಟ್ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಸೂಲಹಳ್ಳಿ ಗ್ರಾಮದ ಸಮೀಪದ ಶ್ರೀ ಸಿಮೆಂಟ್ ಕಂಪನಿಗೆ ಸೇರಿದ ಡಂಪಿಂಗ್ ಯಾರ್ಡ್ ಪ್ರದೇಶದಲ್ಲಿ ಸೋಮವಾರ ಧರಣಿ ಆರಂಭಿಸುವ ಮೂಲಕ ಲಾರಿ ಮಾಲೀಕರು ಕಂಪನಿ ವಿರುದ್ಧ ಧಿಕ್ಕಾರ ಕೂಗಿದರು.
ಸಿಮೆಂಟ್ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳನ್ನು ವಿವಿಧ ರಾಜ್ಯಗಳಿಂದ ರೈಲುಗಳ ಮೂಲಕ ತರಿಸಿಕೊಳ್ಳುತ್ತಿರುವ ಸೇಡಂ ಶ್ರೀ ಸಿಮೆಂಟ್ ಕಂಪನಿ ಸೂಲಹಳ್ಳಿ ಸಮೀಪದ ಡಂಪಿಂಗ್ ಯಾರ್ಡ್ ನಲ್ಲಿ ಜಮಾವಳಿ ಮಾಡುತ್ತಿದೆ. ಇಲ್ಲಿಂದ ಲಾರಿಗಳ ಮೂಲಕ ಸೇಡಂ ಶ್ರೀ ಸಿಮೆಂಟ್ ಕಂಪನಿಗೆ ಕಚ್ಚಾ ವಸ್ತುಗಳು ಸಾಗಿಸಲಾಗುತ್ತಿದೆ. ಕಲ್ಲಿದ್ದಲು, ವಿದ್ಯುತ್ ಘಟಕದ ಬೂದಿ, ಜಿಪ್ಸಂ, ಕ್ಲಿಂಕರ್ ಸೇರಿದಂತೆ ಇತರ ಕಚ್ಚಾ ವಸ್ತುಗಳನ್ನು ಲಾರಿಗಳ ಮೂಲಕವೇ ನಾವು ಸಾಗಿಸುತ್ತೇವೆ. ಇದರಿಂದ ಬರುವ ಲಾರಿ ಬಾಡಿಗೆಗೆ ಲಾಭವಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಶ್ರೀ ಸಿಮೆಂಟ್ ಕಂಪನಿಯು ಸ್ಥಳೀಯ ಲಾರಿಗಳನ್ನು ಕಡೆಗಣಿಸಿ ರಾಜಸ್ಥಾನ್ ಮೂಲದ 40 ಕ್ಕೂ ಹೆಚ್ಚು ಲಾರಿಗಳನ್ನು ತರಿಸುವ ಮೂಲಕ ಕಚ್ಚಾ ವಸ್ತುಗಳನ್ನು ಸಾಗಿಸುತ್ತಿದೆ. ಇದರಿಂದ ಸ್ಥಳೀಯ ಲಾರಿ ಮಾಲೀಕರು ಹಾಗೂ ಲಾರಿ ಚಾಲಕರಿಗೆ ಅನ್ಯಾಯವಾಗುತ್ತಿದೆ. ಲಾರಿ ಮಾಲೀಕರ ನೂರಾರು ಕುಟುಂಬಗಳು ಬೀದಿಗೆ ಬೀಳುತ್ತಿವೆ ಎಂದು ಹೇಳಿದರು.
ಆದ್ದರಿಂದ ತಕ್ಷಣ ರಾಜಸ್ಥಾನ್ ಮೂಲದ ಲಾರಿಗಳನ್ನು ಕೈ ಬಿಟ್ಟು ಸ್ಥಳೀಯ ಲಾರಿ ಮಾಲೀಕರಿಗೆ ಕ್ಲಿಂಕರ್ ಸಾಗಿಸಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಲಾರಿ ಮಾಲೀಕರ ಸಂಘದ ರಾಜು ಕೋಲಿ, ಬಾಬು ಗುತ್ತೇದಾರ, ಹಾಜಪ್ಪ ಕೋಲಿ, ಮಲ್ಲ ರೆಡ್ಡಿ, ಗೋಪಾಲ್ ರಾಮು, ಸೈಫೋದಿನ್ ಜುನೈದಿ, ಬಸವರಾಜ್ ಒಡೆಯರ್, ಸಿದ್ದರಾಮ್ ಪೂಜಾರಿ, ಸಂಜು ಹುಂಡೆಕಲ್, ಉದಯ ಪಾಟೀಲ, ಕುಮಾರ್ ರೆಡ್ಡಿ, ಬಸವರಾಜ್ ಮಳ್ಳಾ, ಪ್ರಕಾಶ್ ಪೂಜಾರಿ, ಅನಿಲ್ ಕುಮಾರ್, ಎಂ.ಡಿ ಸುಹೇಲ್ ಸೇರಿದಂತೆ ಇತರರು ಇದ್ದರು.