ಚಿತ್ತಾಪುರ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಪುನಶ್ಚೇತನಕ್ಕೆ ಪ್ರಾಮಾಣಿಕ ಪ್ರಯತ್ನ: ಅರಣಕಲ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರೈತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘದ ಪುನಶ್ಚೇತನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷ ದೇವಿಂದ್ರ ಅರಣಕಲ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟರಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಸಂಘದ ಅಭಿವೃದ್ಧಿಗೆ ಅಗತ್ಯ ಅನುದಾನ ಹಾಗೂ ಸೌಲಭ್ಯಗಳ ಬೇಡಿಕೆ ಕುರಿತು ಮನವಿ ಮಾಡಲಾಗುವುದು ಎಂದು ಹೇಳಿದರು.
ರೈತರಿಗೆ ಬೇಕಾದ ಡಿಎಪಿ, ಬೀಜ, ಗೊಬ್ಬರ ಸೇರಿದಂತೆ ಪಡಿತರ ಆಹಾರ ಧಾನ್ಯಗಳು ಸಂಘದ ಮೂಲಕ ಸರಬರಾಜು ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘವು ಬಹಳ ಹಳೆಯ ಸಂಘವಾಗಿದ್ದು ಹಾಗೂ ರೈತರ ಜೀವನಾಡಿಯಾಗಿದೆ. ಈ ಸಂಘದ ಅಭಿವೃದ್ಧಿಗೆ ಸಚಿವರ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಲಾಗುವುದು ಎಂದು ಹೇಳಿದರು.

