ಟೆಂಗಳಿ-ತೊನಸನಳ್ಳಿ ಕ್ರಾಸ್ ರಸ್ತೆ ದುರಸ್ತಿಗೆ ಆಗ್ರಹಿಸಿ ತಟ್ಟೆ ಹಿಡಿದು ಬಿಕ್ಷೆ ಬೇಡುವ ಮೂಲಕ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ : ತಾಲೂಕಿನ ಟೆಂಗಳಿ ಗ್ರಾಮದಿಂದ ತೊನಸನಳ್ಳಿ ಕ್ರಾಸ್ ವರೆಗಿನ ರಸ್ತೆ ತಗ್ಗು ಗುಂಡಿಗಳು ಬಿದ್ದು ಸಂಪೂರ್ಣ ಹದಗೆಟ್ಟಿದ್ದು ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಟೆಂಗಳಿ ಗ್ರಾಮಸ್ಥರು ತಟ್ಟೆ ಹಿಡಿದು ಬಿಕ್ಷೆ ಬೇಡುವ ಮೂಲಕ ಬಸ್ ನಿಲ್ದಾಣ ಮುಂದುಗಡೆ ಶನಿವಾರ ವಿನೂತನ ಪ್ರತಿಭಟನೆ ಮಾಡಿದರು.
ಟೆಂಗಳಿ- ತೊನಸನಳ್ಳಿ ಕ್ರಾಸ್ ವರೆಗಿನ ಸುಮಾರು 4ಕಿ.ಮೀ ರಸ್ತೆ ದುರಸ್ತಿ ಕಂಡು ಸುಮಾರು ದಶಕಗಳೇ ಕಳೆದಿವೆ, ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನೆವಾಗದ ಕಾರಣ ಟೆಂಗಳಿ ಗ್ರಾಮಸ್ಥರು ತಟ್ಟೆ ಹಿಡಿದು ಬಿಕ್ಷೆ ಬೇಡಿ ರಸ್ತೆ ದುರಸ್ತಿಗೆ ಹಣ ಸಂಗ್ರಹ ಮಾಡುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾಳಗಿ ತಹಶೀಲ್ದಾರ್ ಘಮಾವತಿ ರಾಠೋಡ, ಕಲಬುರಗಿ ಲೋಕೋಪಯೋಗಿ ಇಇ ದಶವಂತ ಎಲ್. ಗಾಜರೆ, ಕಾಳಗಿ ಲೋಕೋಪಯೋಗಿ ಎಇಇ ಮಲ್ಲಿಕಾರ್ಜುನ ದಂಡಿನ್, ಚಿತ್ತಾಪುರ ಲೋಕೋಪಯೋಗಿ ಎಇಇ ಮಹ್ಮದ್ ಸಲೀಂ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ ಬೇಟಿ ನೀಡಿ ರಸ್ತೆ ದುರಸ್ತಿ ಕಾರ್ಯ ಪ್ರಾರಂಭ ಮಾಡಿಯೇ ಇಲ್ಲಿಂದ ಹೋಗುವುದಾಗಿ ಹೇಳಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ ಟೆಂಗಳಿ – ತೊನಸನಳ್ಳಿ ಕ್ರಾಸ್ ವರೆಗಿನ ರಸ್ತೆ ತಗ್ಗು ಗುಂಡಿಗಳಿಂದ ಹದಗೆಟ್ಟು ದಶಕಗಳೇ ಕಳೆದಿವೆ, ಈ ರಸ್ತೆಯಲ್ಲಿ ಅನೇಕ ಬಾರಿ ಅಪಘಾತ ಸಂಭವಿಸಿ ಪ್ರಾಣಗಳು ಹೋಗಿವೆ. ರಸ್ತೆ ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವಾರು ಭಾರಿ ಮನವಿ ಮಾಡಿಕೊಂಡರು ಸೌಜನ್ಯಕ್ಕೂ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತಹಶೀಲ್ದಾರ್ ಘಮಾವತಿ ರಾಠೋಡ ಗ್ರಾಮಸ್ಥರ ಮನವೊಲಿಸಿ ಲೋಕೋಪಯೋಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಟೆಂಗಳಿ – ತೊನಸನಳ್ಳಿ ಕ್ರಾಸ್ ವರೆಗಿನ ರಸ್ತೆಯನ್ನು ನಾನು ಪರಿಶೀಲನೆ ಮಾಡಿಕೊಂಡೆ ಸ್ಥಳಕ್ಕೆ ಬಂದಿದ್ದೇನೆ, ರಸ್ತೆ ತುಂಬಾ ಕೆಟ್ಟು ಹೋಗಿದೆ ಇವತ್ತು ಎಷ್ಟೋತ್ತಾದರೂ ರಸ್ತೆಯ ತಗ್ಗು- ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿ, ಒಂದು ವಾರದಲ್ಲಿ ಹೊಸ ಡಾಂಬರೀಕರಣ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡುತ್ತೇವೆ ಎಂದು ಹೇಳಿದಾಗ ಗ್ರಾಮಸ್ಥರು ಅಧಿಕಾರಿಗಳ ಮಾತಿಗೆ ಬೆಲೆ ನೀಡಿ ಬಿಕ್ಷಾಟನೆ ಮಾಡುವುದನ್ನು ಕೈಬಿಟ್ಟರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ವಿಜಯಕುಮಾರ್ ತುಮಕುನ್, ಲಿಂಗನಬಸವ ಸೇಡಂ, ಮಲ್ಲಿಕಾರ್ಜುನ ಕೇಶ್ವಾರ್, ಜಾವೀದ ಅಫಖಾನ್, ಫಿರ್ದೀಶ ಸಿಕಲಗಾರ, ಫಕೀರಯ್ಯ ಸ್ಥಾವರಮಠ, ಪ್ರಸಾದ ಹಳ್ಳಿ, ಭೀಮಾಶಂಕರ ಅಂಕಲಗಿ, ರಾಜು ಪಟ್ಟೆದ್, ವಿಶ್ವನಾಥ ಬಾಳೆದ್, ಬಸವರಾಜ ಬೊಧನ್, ವಿಕ್ರಮ ನಾಮದಾರ, ಬಸವರಾಜ ಕಡ್ಲಿ, ಮಹ್ಮದ ಲಧಾಫ್ ಸೇರಿದಂತೆ ಅನೇಕರು ಇದ್ದರು.
“ಅಧಿಕಾರಿಗಳ ಮಾತಿಗೆ ಬೆಲೆ ನೀಡಿ ಬಿಕ್ಷೆ ಬೇಡಿ ರಸ್ತೆ ದುರಸ್ತಿಗೆ ಹಣ ಸಂಗ್ರಹಿಸುವುದನ್ನು ಕೈಬಿಟ್ಟಿದ್ದೇವೆ. ವಾರದಲ್ಲಿ ಟೆಂಗಳಿ- ತೊನಸನಳ್ಳಿ ಕ್ರಾಸ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದಿದ್ದರೆ ಇನ್ನೂ ವಿನೂತನ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು”.-ಪ್ರಸಾದ ಹಳ್ಳಿ ಟೆಂಗಳಿ ಗ್ರಾಮಸ್ಥ.
“ಟೆಂಗಳಿ- ತೊನಸನಳ್ಳಿ ಕ್ರಾಸ್ ವರೆಗೆ ರಸ್ತೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ, ರಸ್ತೆಯಲ್ಲಿ ತಗ್ಗು ಬಿದ್ದು ನೀರು ತುಂಬಿಕೊಂಡು ಸಂಚಾರಕ್ಕೆ ಕಷ್ಟಕರವಾಗಿತ್ತು. ಗ್ರಾಮಸ್ಥರ ಮನವೊಲಿಸಿ ಸ್ಥಳದಲ್ಲೇ ಜೆಸಿಬಿ ಯಂತ್ರಗಳಿಂದ ರಸ್ತೆ ದುರಸ್ತೆ ಕಾರ್ಯ ಮಾಡಲಾಗಿದೆ. ಹೊಸ ಡಾಂಬಾರೀಕರಣ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದು ವಾರದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ”.-ಘಮಾವತಿ ರಾಠೋಡ ತಹಶೀಲ್ದಾರ್ ಕಾಳಗಿ.