ಕಬ್ಬಿನ ಲಾರಿಗಳು ಸುಗಮವಾಗಿ ಸಂಚರಿಸಲು ಜೋತು ಬಿದ್ದ ವಿದ್ಯುತ್ ತಂತಿಗಳು ಸರಿಪಡಿಸುವಂತೆ ಆಗ್ರಹಿಸಿ ರೈತ ಸಂಘದಿಂದ ಜೆಸ್ಕಾಂ ಶಾಖಾಧಿಕಾರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಚಂದನಕೇರಾ ದಿಂದ ರಾಣಾಪೂರ ತಾಂಡದವರೆಗಿನ ಮುಖ್ಯ ರಸ್ತೆಯಲ್ಲಿರುವ ವೈರ್ ಗಳು ಜೋತು ಬಿದ್ದಿರುವ ಕಂಬಗಳಿಗೆ ಹೈಟ್ನರ್ ಗಳನ್ನು ಅಳವಡಿಸಿ ಕಬ್ಬಿನ ಲಾರಿಗಳು ಸುಗಮವಾಗಿ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಗಡಿಲಿಂಗದಳ್ಳಿ ಗ್ರಾಮ ಘಟಕ ಹಾಗೂ ಕರ್ನಾಟಕ ರಾಜ್ಯ ರೈತ ಸೇನೆ ಹಾಗೂ ರೈತ ಸಂಘ ಚಿಂಚೋಳಿ ಮತ್ತು ಕಾಳಗಿ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್ ಅವರು ಜೆಸ್ಕಾಂ ಉಪ ವಿಭಾಗ ಶಾಖಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಗಡಿಲಿಂಗದಳ್ಳಿ ಗ್ರಾಮದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಕಬ್ಬನ್ನು ಬೆಳೆದಿದ್ದು ಈಗಾಗಲೇ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಮೊಗದಾಳ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆ ಚೌಡಾಪುರ ಗಳಿಗೆ ಕಬ್ಬನ್ನು ಸಾಗಾಣಿಕೆ ಮಾಡಲಾಗುತ್ತಿದೆ. ದಿನಾಲು ನಮ್ಮ ಗ್ರಾಮದಿಂದ ನಾಲ್ಕು ಲಾರಿಗಳ ಮೂಲಕ ಕಬ್ಬು ಕಾರ್ಖಾನೆಗೆ ಸರಬರಾಜು ಆಗುತ್ತಿದೆ ಆದರೆ ಚಂದನಕೇರಾದಿಂದ ರಾಣಾಪೂರ ತಾಂಡದವರೆಗಿನ ಮುಖ್ಯ ರಸ್ತೆಯಲ್ಲಿ ಸುಮಾರು 6-7 ಕಡೆಗಳಲ್ಲಿ ವೈರುಗಳು ಜೋತು ಬಿದ್ದಿದ್ದು ಖಾಲಿ ಲಾರಿಗಳು ಸಹ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದ್ದು, ನಾಲ್ಕಾರು ದಿನಗಳಿಂದ ಕೆಬಿ ಸಂಪರ್ಕದಲ್ಲಿ ಇದ್ದು, ಕಬ್ಬು ತುಂಬಿದ ಗಾಡಿ ಸಾಗಿಸಲು ಎಲ್.ಸಿ ತೆಗೆದುಕೊಂಡು ವೈರನ್ನು ಎತ್ತಿ ಲಾರಿಯನ್ನು ಕಳಿಸುತಿದ್ದೇವೆ ಈ ಬಗ್ಗೆ ಕಳೆದ ಒಂದು ವಾರದಿಂದ ಫೋನ್ ಕರೆಯ ಮೂಲಕ ನಿರಂತರವಾಗಿ ತಮ್ಮ ಗಮನಕ್ಕೂ ತಂದರೂ ಸಹ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಷಾದನೀಯವಾಗಿದ್ದು ಮುಂದಾಗುವ ಅನಾಹುತಗಳಿಗೆ ತಾವೇ ಆಹ್ವಾನ ಕೊಟ್ಟಂತಾಗುತ್ತಿದೆ ಒಂದು ವೇಳೆ ಕಬ್ಬು ಸಾಗಿಸುವ ಸಂದರ್ಭದಲ್ಲಿ ಕಂಬದ ವೈರ್ ಗಳು ಕಡೆದು ಬಿದ್ದು ಸಾವು ನೋವುಗಳು ಸಂಭವಿಸಿದರೆ ಅದಕ್ಕೆ ತಾವೇ ಸಂಪೂರ್ಣ ಜವಾಬ್ದಾರರಾಗಿರುತ್ತಿರಿ ಎಂದು ಎಚ್ಚರಿಸಿದ್ದಾರೆ
ಚಿಂಚೋಳಿಯ ಸಿದ್ದಶ್ರೀ ಫ್ಯಾಕ್ಟರಿ ಬಂದ್ ಆಗಿರುವ ಕಾರಣ ಈಗಾಗಲೇ ಕಬ್ಬು ಬೆಳೆಗಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ ನಿಮ್ಮ ಲೈನ್ ಮ್ಯಾನ್ ಗಳು ಹೈಟ್ನರ್ ಗಳನ್ನ ಅಳವಡಿಸಲು ತಗಲುವ ವೆಚ್ಚವನ್ನು ರೈತರೇ ಭರಿಸಿದಲ್ಲಿ ಸರಿಪಡಿಸಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿರುವ ನಮಗೆ ಇದು ಸಾಧ್ಯವಾಗುವುದಿಲ್ಲ ಬೇರೆ ಫ್ಯಾಕ್ಟರಿಗಳ ಮಾಲೀಕರಿಗೆ ಕೈಕಾಲಿಗೆ ಬಿದ್ದು ಗ್ಯಾಂಗಿನವರಿಗೆ ಅವರು ಕೇಳಿದ್ದಷ್ಟು ದುಡ್ಡು ಕೊಟ್ಟು ಕಬ್ಬನ್ನು ಸಾಗಿಸುತ್ತಿದ್ದು ವೈರ್ ಗಳ ಕಾರಣದಿಂದ ಅವರು ನಿಮ್ಮ ಕಬ್ಬನ್ನು ಕಡಿಯುವುದಿಲ್ಲ ಎಂದು ತಕರಾರು ಮಾಡುತ್ತಿದ್ದಾರೆ. ಒಂದು ವೇಳೆ ಅವರು ಕಬ್ಬು ಕಡಿಯುವುದನ್ನು ಬಿಟ್ಟು ಹೋದಲ್ಲಿ ಅದಕ್ಕೂ ಕೂಡ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಆದಕಾರಣ ತಕ್ಷಣ ಎಚ್ಚೆತ್ತುಕೊಂಡು ಕಂಬಗಳಿಗೆ ಹೈಟ್ನರ್ ಅಳವಡಿಸಿ ವೈರ್ ಗಳನ್ನು ಸರಿಪಡಿಸಿ ಲಾರಿಗಳು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಬೇಕು ಇಲ್ಲದಿದ್ದರೆ ರಸ್ತೆ ತಡೆ ಹಮ್ಮಿಕೊಂಡು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.