ವಾಡಿ ಬ್ರಹ್ಮಕುಮಾರಿ ಕೇಂದ್ರದಲ್ಲಿ ದೀಪಾವಳಿ ಆಚರಣೆ, ದೀಪವು ಆಧ್ಯಾತ್ಮಿಕ ಕತ್ತಲೆಯಿಂದ ರಕ್ಷಿಸುವ ಆಂತರಿಕ ಬೆಳಕು: ಕಲಾವತಿ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿಸ್ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮಿ ನಾರಾಯಣ ವೇಷಧಾರಿಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಈ ವೇಳೆ ಸೇಡಂ ಬ್ರಹ್ಮಕುಮಾರಿ ಕೇಂದ್ರದ ಬಿಕೆ ಕಲಾವತಿ ಅವರು ಮಾತನಾಡಿ, ದೀಪಾವಳಿ ಹಬ್ಬ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದು ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಂಕೇತಿಸುತ್ತದೆ. ದೀಪವು ಆಧ್ಯಾತ್ಮಿಕ ಕತ್ತಲೆಯಿಂದ ರಕ್ಷಿಸುವ ಆಂತರಿಕ ಬೆಳಕನ್ನು ಪ್ರತಿನಿಧಿಸುತ್ತದೆ ಎಂದರು.
ದೀಪಗಳನ್ನು ಬೆಳಗಿ ಕತ್ತಲನ್ನು ದೂರಾಗಿಸುವ, ಪಟಾಕಿ ಸಿಡಿಸಿ ಸಂಭ್ರಮಿಸುವ ಹಬ್ಬ. ದೇಶ-ವಿದೇಶಗಳಲ್ಲಿ ದೀಪಾವಳಿ ಆಚರಣೆ ವೈವಿಧ್ಯತೆಯಿಂದ ಕೂಡಿರುತ್ತದೆ. ದೀಪಗಳ ಉತ್ಸವ, ಸಂತೋಷ, ಸಮೃದ್ಧಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ. ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಇಂತಹ ಪವಿತ್ರ ಸಮಯದಲ್ಲಿ ದೇವಾನುದೇವತೆಗಳು ಸಂಪನ್ನರಾಗಿರುವುದರಿಂದ ಅವರ ಆರಾಧನೆ, ಧ್ಯಾನದಿಂದ ನಮ್ಮ ಜೀವನಕ್ಕೆ ಸಕಲ ಸಮೃದ್ದಿಯೊಂದಿಗೆ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ಲಕ್ಷ್ಮೀ ವೇಷದಾರಿಯಾಗಿ ತೃಪ್ತಿ ಯಾರಿ, ನಾರಾಯಣ ನಾಗಿ ರೋಹಿಣಿ ಪಾಟೀಲ ಗಮನ ಸೆಳೆದರು. ಈ ಸಂದರ್ಭದಲ್ಲಿ ವಾಡಿ ಕೇಂದ್ರದ ಬಿಕೆ ಮಹಾನಂದ, ಸಂತೋಷ ದಹಿಹಂಡೆ, ಸುಭಾಷ ಬಳಚಡ್ಡಿ, ಚಂದ್ರಶೇಖರ ಪಾಟೀಲ, ಡಾ ಸಂತೋಷ, ಪತಂಜಲಿ ಯೋಗ ಸಾಧಕ ವೀರಣ್ಣ ಯಾರಿ ಸೇರಿದಂತೆ ಅನೇಕ ಮಹಿಳೆಯರು ಭಾಗಿಯಾಗಿ ಸಂಭ್ರಮಿಸಿದರು.