ವಾಡಿ ಸ್ಥಳೀಯ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ವಾಡಿ: ಅಂತರರಾಜ್ಯ ವಲಸೆ ಕಾರ್ಮಿಕರ ಹಾವಳಿ ತಡೆದು ಸ್ಥಳೀಯ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಮುಖಂಡರು ಮಂಗಳವಾರ ವಾಡಿ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಮ್ಮ ಕರ್ನಾಟಕ ಸೇನೆ ವಾಡಿ ಅಧ್ಯಕ್ಷ ಸಿದ್ದು ಪೂಜಾರಿ ಮಾತನಾಡಿ, ಅದಾನಿ ಒಡೆತನದ ಎಸಿಸಿ ಸಿಮೆಂಟ್ ಕೈಗಾರಿಕ ಕಂಪನಿಯು ಕನ್ನಡಿಗರ ಜಮೀನು ಪಡೆದು ಕನ್ನಡಯೇತರರಿಗೆ ಉದ್ಯೋಗ ನೀಡುವುದಲ್ಲದೆ ಊಟ, ವಸತಿ, ನೀರು ಮತ್ತು ವಿದ್ಯುತ್ ಗಳಂತ ಮೂಲಭೂತ ಸೌಕರ್ಯ ನೀಡುತ್ತಿದ್ದು ಕನ್ನಡಿಗರಿಗೆ ಕೇವಲ ಉದ್ಯೋಗ ನೀಡುವಲ್ಲಿ ಅನ್ಯಾಯ ಮಾಡುತ್ತಿದೆ. ಕಂಪನಿಯ ಆಡಳಿತ ವರ್ಗದಲ್ಲಿ (ಎ ಮತ್ತು ಬಿ ಗ್ರೂಪ್ ಮೇಲಂತದ ನೌಕರ) ಶೇ.60 ರಷ್ಟು ಹಾಗೂ ಕೆಳ ಹಂತದ ಸಿ ಮತ್ತು ಡಿ ಗ್ರೂಪ್ ನೌಕರಿಯಲ್ಲಿ ಶೇ.100 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಉದ್ಯೋಗಳು ಕನ್ನಡಿಗರ ಹಕ್ಕಾಗಿದ್ದು, ಕರ್ನಾಟಕದಲ್ಲಿ ಹುಟ್ಟುವ ಉದ್ಯೋಗಗಳು ಕನ್ನಡಿಗರಿಗೆ ಧಕ್ಕುವಂತೆ ಸೂಕ್ತ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಸಂಘಟನಾ ಸಂಚಾಲಕ ಅಂಬರೀಷ್ ಮಾಳಗಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಸಿಂದಗಿ, ವಾಡಿ ಯುವ ಘಟಕ ಅಧ್ಯಕ್ಷ ಭೀಮಯ್ಯ ಗುತ್ತೇದಾರ ಸೇರಿದಂತೆ ಇತರರು ಇದ್ದರು.