ವಾಡಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ, ಬೃಹತ್ ಪಥಸಂಚಲನ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದಲ್ಲಿ ಎಐಡಿಎಸ್ ಒ ಹಾಗೂ ಎಐಡಿವೈಒ ಸಂಘಟನೆಗಳ ವತಿಯಿಂದ ಗುರುವಾರ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿ ಆಚರಿಸಲಾಯಿತು.
15 ಕ್ಕೂ ಹೆಚ್ಚು ಪ್ರೌಢ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ನೇತಾಜಿ ಭಾವಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಪಥಸಂಚಲನ ನಡೆಸಿಕೊಟ್ಟರು. ಮೆರವಣಿಗೆಯಲ್ಲಿ ನೇತಾಜಿ ಅವರ ಉತ್ತರಾಧಿಕಾರಿಗಳು ನಾವು, ಕ್ರಾಂತಿ ಚಿರಾಯುವಾಗಲಿ, ನೇತಾಜಿ ಅವರ ವಿಚಾರಧಾರೆಗಳು ಎಲ್ಲೆಲ್ಲೂ ಹರಡಲಿ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ನಂತರ ಎಸಿಸಿ ಕೌಶಲ್ಯ ತರಬೇತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಶಿಕ್ಷಕ ಬಸವರಾಜ ಹೊಸಮನಿ ಮತ್ತು ಎಐಡಿಎಸ್ ಒ ಜಿಲ್ಲಾ ಕಾರ್ಯದರ್ಶಿ ತುಳಜಾರಾಮ ಎನ್.ಕೆ, ಭಾರತೀಯರನ್ನು ತುಳಿದು ಶೋಷಣೆ ಮಾಡುತ್ತಿದ್ದ ಬ್ರಿಟಿಷರನ್ನು ಓಡಿಸಿ ಸ್ವಾತಂತ್ರ್ಯ ಪಡೆಯಲು ಸಂಧಾನತೀತ ಹೋರಾಟ ನಡೆಸಿದರು ಎಂದು ಹೇಳಿದರು.
ಐಎನ್ ಎ ಸೈನ್ಯವನ್ನು ಕಟ್ಟಿ ಬ್ರಿಟಿಷರ ವಿರುದ್ಧ ತಿರುಗಿಬಿದ್ದರು. ಭಾರತ ಸ್ವಾತಂತ್ರ್ಯವಾದ ನಂತರ ಸಮಾಜವಾದಿ ವ್ಯವಸ್ಥೆ ಜಾರಿಯಾಗಬೇಕು. ಮಾನವ ಶೋಷಣೆ ನಿಲ್ಲಬೇಕು. ಹಸಿವು, ಬಡತನ, ನಿರುದ್ಯೋಗ, ಅಸಮಾನತೆ, ಶೋಷಣೆ, ದೌರ್ಜನ್ಯಗಳು ನಿಲ್ಲಬೇಕು ಎಂಬ ಕನಸು ನೇತಾಜಿ ಸುಭಾಷ್ ಚಂದ್ರ ಬೋಸ್ ಅರವರಿಗಿತ್ತು. ಆದರೆ ಸ್ವಾತಂತ್ರ್ಯ ನಮ್ಮದೇ ದೇಶದ ಶೋಷಕರ ಕೈಗೆ ಬಂತು. ನೇತಾಜಿ ಅವರ ಕನಸು ನನಸು ಮಾಡುವ ಜವಾಬ್ದಾರಿ ಇಂದಿನ ವಿದ್ಯಾರ್ಥಿ ಯುವಕರ ಮೇಲಿದೆ ಎಂದರು.
ಸಂಘಟನೆಗಳ ಮುಖಂಡರಾದ ದತ್ತು ಹುಡೇಕರ್, ಎಸಿಸಿಯ ಅಶೋಕ ಹಾಳ್ವಿ, ಸಂಗಪ್ಪ ಐತಿವಲ್, ಶರಣು ಹೇರೂರ, ವೆಂಕಟೇಶ ದೇವದುರ್ಗ, ಮಲ್ಲಿನಾಥ ಹುಂಡೇಕಲ್, ಗೌತಮ ಪರ್ತೂರಕರ, ಗೋವಿಂದ ಹೆಳವಾರ, ಶಿವುಕುಮಾರ ಆಂದೋಲಾ, ಅವಿನಾಶ ಒಡೆಯರಾಜ, ಅನಿಕೇತನ್ ಹೇರೂರ, ಪ್ರೀತಮ್ ಹೇರೂರ, ಸಿದ್ದಯ್ಯ ಶಾಸ್ತ್ರೀ ನಂದೂರಮಠ, ಮಲ್ಲೇಶ್ ನಾಟೀಕಾರ, ರಾಜು ಒಡೆಯರಾಜ, ಸಿದ್ದಾರ್ಥ್ ತಿಪ್ಪನೋರ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.