Oplus_0

ಯಾದಗಿರಿ ಗುತ್ತಿಗೆದಾರ ನಕಲಿ ರೂ.22 ಲಕ್ಷ ಎಫ್ಡಿಆರ್ ಸಲ್ಲಿಸಿ, ರೂ.1.84 ಕೋಟಿ ಬಿಲ್ ಪಡೆಯಲು ಯತ್ನ | ಅಕ್ರಮ ಎಸಗಿರುವ ಗುತ್ತಿಗೆದಾರ, ಅಧಿಕಾರಿಗಳ‌ ವಿರುದ್ಧ ಕಾನೂನು ಕ್ರಮಕ್ಕೆ ರಾಠೋಡ ಆಗ್ರಹ 

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ಜಿಲ್ಲೆಯ ದೊಡ್ಡ ಕೆರೆ ಅಭಿವೃದ್ಧಿ (ನಾಬರ್ಡ್-ಆರ್’ಐಡಿಎಫ್-29-2023-24) ಹಾಗೂ ವಡಗೇರಾ ಹೊಸ ಕೆರೆ ಅಭಿವೃದ್ಧಿ (ಎಸ್ಡಿಎಂಎಫ್-2024-25) ಕಾಮಗಾರಿಗಳಲ್ಲಿ ಗುತ್ತಿಗೆದಾರ ರಮೇಶ್ ಬಿ. ಪವಾರ್ ನಕಲಿ ರೂ.22 ಲಕ್ಷ ಎಫ್ಡಿಆರ್ ಸಲ್ಲಿಸಿ, ರೂ.1.84 ಕೋಟಿ ಬಿಲ್ ಪಡೆಯಲು ಯತ್ನಿಸಿರುವ ಗಂಭೀರ ವಂಚನೆ ಬೆಳಕಿಗೆ ಬಂದಿದೆ.

ಈ ಅಕ್ರಮದಲ್ಲಿ ಗುತ್ತಿಗೆದಾರನ ಜೊತೆಗೆ ಸಣ್ಣ ನೀರಾವರಿ ಇಲಾಖೆಯ ಕಲಬುರಗಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ನಾಗಣಗೌಡ ವಿ. ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಸವರಾಜ ರಾಠೋಡ ಗಂಭೀರವಾಗಿ ಆರೋಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಗುತ್ತಿಗೆದಾರ ರಮೇಶ್ ಬಿ. ಪವಾರ್ ಇಲಾಖೆಯಿಂದ ಕಾಮಗಾರಿಗೆ ಕಾರ್ಯಾದೇಶ ಪಡೆದು, ಕರಾರು ಒಪ್ಪಂದದ ಸಮಯದಲ್ಲಿ ರೂ.22 ಲಕ್ಷ ಎಫ್ಡಿಆರ್ ಸಲ್ಲಿಸಿದ್ದಾರೆ. ಆದರೆ ಸಲ್ಲಿಸಿದ ಎಫ್ಡಿಆರ್ ನಕಲಿ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್, ಗಾಂಧಿ ನಗರ ಶಾಖೆ, ಧಾರವಾಡ ನೈಜತೆಯ ದೃಢೀಕರಣ ಪತ್ರದಿಂದ ಬಹಿರಂಗವಾಗಿದೆ.

ಅಕ್ರಮವಾಗಿ ಲಾಭ ಪಡೆಯುವ ಉದ್ದೇಶದಿಂದ ವಂಚನೆ ನಡೆಸಿರುವ ಗುತ್ತಿಗೆದಾರರ ಜೊತೆ ಶಾಮೀಲಾಗಿರುವ  ಕಲಬುರಗಿ ವಿಭಾಗ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಗುತ್ತಿಗೆದಾರರಿಂದ ಬ್ಯಾಂಕಿನಿಂದ ಪಡೆದ ನಕಲಿ ಅಥವಾ ವ್ಯತ್ಯಾಸದ ಮೊತ್ತದ ಎಫ್ಡಿಆರ್ ಅನ್ನು ಪರಿಶೀಲಿಸದೇ ಕಾಮಗಾರಿಗಳ ಕಾರ್ಯದೇಶ ನೀಡಿರುವುದು ಅಧಿಕಾರದ ದುರ್ಬಳಕೆಯಾಗಿದೆ. ಈ ಮೂಲಕ ಅವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿದೆ.

ಅಕ್ರಮದ ಗಂಭೀರತೆ: 

ನಕಲಿ ದಾಖಲೆಗಳ ಬಳಕೆ – ಬ್ಯಾಂಕ್ ದೃಢೀಕರಿಸಿದಂತೆ ಎಫ್ಡಿಆರ್ ನಕಲು, ಕಳಪೆ ಗುಣಮಟ್ಟದ ಕಾಮಗಾರಿಗಳು  ನಿಯಮಬಾಹಿರವಾಗಿ ನಿರ್ವಹಣೆ, ಅಧಿಕಾರಿಗಳ ನಿರ್ಲಕ್ಷ್ಯ, ಸಹಕಾರ – ಇಇ (ಕಾರ್ಯನಿರ್ವಾಹಕ ಅಭಿಯಂತರ) ಅವರು ಎಫ್ಡಿಆರ್ ನ ನೈಜತೆ ಪರಿಶೀಲಿಸದೆ ಕಾರ್ಯದೇಶ ನೀಡಿರುವುದು, ಸಾರ್ವಜನಿಕ ಹಣದ ದುರ್ಬಳಕೆ, ನಷ್ಟದ ಹೊಣೆ ಸರ್ಕಾರಕ್ಕೆ, ಲಾಭ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಆಗಿದೆ. ಹೀಗಾಗಿ ಸರ್ಕಾರಕ್ಕೆ ಆರ್ಥಿಕ ನಷ್ಟ ಸಾರ್ವಜನಿಕ ಹಣದ ದುರ್ಬಳಕೆ ಆದಂತಾಗಿದೆ.

ಈ ಪ್ರಕರಣವು ಕೇವಲ ಹಣಕಾಸಿನ ವಂಚನೆಯಷ್ಟೇ ಅಲ್ಲ, ಸಾರ್ವಜನಿಕ ಸಂಪತ್ತಿನ ದುರ್ಬಳಕೆಯ ನಿದರ್ಶನವಾಗಿದೆ. ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ. ಜನರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಿದೆ. ಹೀಗಾಗಿ ಇಂತಹ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ಜನರು ಒತ್ತಾಯಿಸಿದ್ದಾರೆ.

“ಸರ್ಕಾರಕ್ಕೆ ವಂಚಿಸಿದ ಗುತ್ತಿಗೆದಾರ ರಮೇಶ್ ಬಿ. ಪವಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಈ ನಿಟ್ಟಿನಲ್ಲಿ ಇತರೆ ಇಲಾಖೆಗಳಲ್ಲೂ ಇವರಿಂದ ನಡೆದಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು”.-ಬಸವರಾಜ ರಾಠೋಡ ತಾಪಂ ಮಾಜಿ ಸದಸ್ಯರು ಯಾದಗಿರಿ.

Spread the love

Leave a Reply

Your email address will not be published. Required fields are marked *

You missed

error: Content is protected !!