ಮುಂಗಾರು ಮಳೆ ಕೊರತೆ, ರೈತರ ನೆರವಿಗೆ ಧಾವಿಸಲು ಸರ್ಕಾರಕ್ಕೆ ರೇವಣಸಿದ್ಧ ಬಡಾ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಹದಗೆಟ್ಟಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಅನ್ನದಾತರ ನೆರವಿಗೆ ಮುಂದಾಗಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರೇವಣಸಿದ್ಧ ಬಡಾ ಆಗ್ರಹಿಸಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಳೆಯಿಲ್ಲದೆ ಕೃಷಿ ಭೂಮಿ ಒಣಗುತ್ತಿದ್ದು, ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಬ್ಯಾಂಕುಗಳ ಸಾಲದ ಸುಳಿಗೆ ಸಿಲುಕಿರುವ ಅನ್ನದಾತರಿಗೆ ಸರ್ಕಾರವೇ ಧೈರ್ಯ ತುಂಬಬೇಕಾದ ತುರ್ತು ಸಂದರ್ಭವಿದು. ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಕೃಷಿ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಮುಂದೆ ಬರುವ ಮಳೆಯನ್ನು ಆಶ್ರಯಿಸಿ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಶೇ.100 ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಒದಗಿಸಬೇಕು. ಬಿತ್ತನೆ ಒಣಗಿದ ಅಥವಾ ಬಿತ್ತನೆಯಾಗದ ಜಮೀನುಗಳಿಗೆ ತಕ್ಷಣವೇ ಹೆಕ್ಟೇರ್ ಆಧಾರದ ಮೇಲೆ ಸೂಕ್ತ ಆರ್ಥಿಕ ಪರಿಹಾರ ಘೋಷಿಸಬೇಕು. ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ರೈತರು ಸಾಲ ತೀರಿಸಲಾಗದ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ರಾಷ್ಟ್ರೀಕೃತ, ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಕೃಷಿ ಸಾಲಗಳನ್ನು ಸರ್ಕಾರ ತಕ್ಷಣವೇ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

