ಸನ್ನತಿ ಸರ್ಕಾರಿ ಶಾಲೆಗಳ ಮಕ್ಕಳಿಗೆ 236 ಕಿಟ್ ಗಳು ವಿತರಣೆ | ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿ ಮತ್ತು ಯೂಥ್ ಫಾರ್ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸನ್ನತಿ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿ ಮತ್ತು ಯೂಥ್ ಫಾರ್ ಸೇವಾ ಸಂಸ್ಥೆಯ ಸಹಕಾರದಿಂದ ಶಾಲಾ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಉಚಿತವಾಗಿ 236 ಶಾಲಾ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ ಜೋಷಿ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಶಾಲಾ ಕಿಟ್ ಗಳನ್ನು ವಿತರಣೆ ಮಾಡುತ್ತಿರುವ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿ ಮತ್ತು ಯೂಥ್ ಫಾರ್ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಶಾಲಾ ಕಿಟ್ ಗಳು ಬ್ಯಾಗ್, ನೋಟ್ ಪುಸ್ತಕಗಳು, ಪೆನ್ಸಿಲ್, ಎರೆಸರ್, ಶಾರ್ಪ್ನರ್, ಪೆನ್ನು, ಕ್ರೀಯೋನ್ಸ್ ಮತ್ತು ಇತರೆ ಅಗತ್ಯವಾದ ಪಠ್ಯ ಸಾಮಗ್ರಿಗಳನ್ನು ಒಳಗೊಂಡಿವೆ. ಶಾಲಾ ಮಕ್ಕಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡುವುದು ಹಾಗೂ ಅವರ ಕಲಿಕೆಗೆ ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಒದಗಿಸಿ ಹೆಚ್ಚಿನ ಶಿಕ್ಷಣಕ್ಕೆ ಒತ್ತು ಕೊಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಈ ಸಾಮಾಜಿಕ ಕಾರ್ಯಕ್ಕೆ ವಿಶೇಷ ಬೆಂಬಲ ಸೂಚಿಸುವ ನಿಟ್ಟಿನಲ್ಲಿ, ಸನ್ನತಿ ಊರಿನ ಹಿರಿಯ ಮುಖಂಡರಾದ ಶಿವಯೋಗೇಪ್ಪ ಸಾಹುಕಾರ, ಸುರೇಶಗೌಡ ಹಾಗೂ ಎಸ್ಡಿಎಂಸಿ ಅಧ್ಯಕ್ಷೆ ಪ್ರಿಯಾಂಕ್ ಮತ್ತು ಉಪಾಧ್ಯಕ್ಷ ನಾನೇಗೌಡ ಹಾಗೂ ಜಗಯ್ಯ ಶಾಸ್ತ್ರೀಗಳು ಸದಸ್ಯರು ಗ್ರಾಮಸ್ಥರು ಖುದ್ದಾಗಿ ಆಗಮಿಸಿ ಮಕ್ಕಳಿಗೆ ಕಿಟ್ ಗಳನ್ನು ಹಸ್ತಾಂತರಿಸಿದರು. ಇದು ಸಂಸ್ಥೆಯ ದೀರ್ಘ ಅವಧಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯ ಭಾಗವಾಗಿದ್ದು, 2015 ರಿಂದ ಈ ವರೆಗೆ ಟೆಕ್ಸಸ್ ಇನ್ಸ್ಟ್ರಮೆಂಟ್ಸ್ ಮತ್ತು ಯೂಥ ಫಾರ್ ಸೇವಾ ಜಂಟಿಯಾಗಿ ವಿವಿಧ ಭಾಗಗಳ 2,00,000ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್ ಗಳನ್ನು ತಲುಪಿಸಿದೆ.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ನಿರಂತರವಾಗಿ ಬೆಂಬಲ ನೀಡುತ್ತಿರುವ ಟೆಕ್ಸ ಸ್ ಇನ್ಸ್ಟ್ರಮೆಂಟ್ಸ್ ಮತ್ತು ಯೂಥ್ ಫಾರ್ ಸೇವಾ ಸಂಸ್ಥೆಗಳಿಗೆ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮಿ ಜೋಷಿ, ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಟೆಕ್ಸಸ್ ಇನ್ಸ್ಟ್ರುಮೆಂಟ್ ಕಂಪನಿಯವರು, ಯೂಥ್ ಫಾರ್ ಸೇವಾ ಸಂಸ್ಥೆಯ ಹುಬ್ಬಳ್ಳಿ ಘಟಕದ ಸಲಹಾ ಹಾಗೂ ಸಂಚಲನ ಸಮಿತಿಯ ಸದಸ್ಯರುಗಳು, ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂ ಸೇವಕರು, ವಿದ್ಯಾ ಚೇತನ ಸ್ಕಾಲರ್ಸ್, ಶಾಲಾ ಮುಖೋಪಾಧ್ಯರು, ಶಿಕ್ಷಕರು ಹಾಗೂ ಸ್ಥಳೀಯ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು. ಸಮಾಜದ ಪ್ರಗತಿಗೆ ವಿದ್ಯೆ ಅನಿವಾರ್ಯವಾದ್ದರಿಂದ ಇಂತಹ ಸಹಾಯ ಸಹಕಾರಗಳು ಬಹುಮುಖ್ಯವಾಗಿವೆ ಎಂದು ಎಲ್ಲರೂ ಅಭಿಪ್ರಾಯಪಟ್ಟರು.

