ಕಲಬುರಗಿ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡುವಂತೆ ಬಿಜೆಪಿ ಮುಖಂಡರಿಂದ ಮುಖ್ಯಮಂತ್ರಿಗೆ ಮನವಿ 

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಜಿಲ್ಲೆಯಲ್ಲಿ ಮಳೆ ಬಾರದೆ ಇರುವುದರಿಂದ ರೈತರು ಭೀಕರ ಬರಗಾಲ ಪರಿಸ್ಥಿತಿಯಿಂದ ಕಂಗಾಲಾಗಿರುತ್ತಾರೆ. ಹೊಲ ಗದ್ದೆಗಳಲ್ಲಿ ಮುಂಗಾರು ಬಿತ್ತನೆ ಆಗಿರುವುದಿಲ್ಲ. ರೈತಾಪಿ ಕುಟುಂಬ ಮುಂಗಾರು ಬೆಳೆಗಳ ಮೇಲೆ ಅವರ ಜೀವನ ಅವಲಿಂಬತವಾಗಿರುವುದರಿಂದ ಸಂಕಷ್ಟಕ್ಕೆ ಈಡಾಗಿರುತ್ತಾರೆ. ಕಾರಣ ಕಲಬುರಗಿ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತರ ಕೃಷಿ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು, ಮಳೆ ಬಾರದೆ ಇರುವುದರಿಂದ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿಯನ್ನು ಪರಿಹಾರ ನೀಡಬೇಕು, ಭೀಮಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ಮಹಾರಾಷ್ಟ್ರದಿಂದ 5 ಟಿ.ಎಂ.ಸಿ. ನೀರು ಬಿಡಗಡೆ ಮಾಡಿಸಬೇಕು, ಕರ್ನಾಟಕ ಚುನಾವಣಾ ಆಯೋಗದ ಆದೇಶ ಇದ್ದರೂ ಸಹ ಎಸ್.ಐ.ಆರ್ ನಲ್ಲಿ ತೊಡಗಿರುವ ತಹಸೀಲ್ದಾರರು/ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೂಡಲೇ ಸದರಿ ವರ್ಗಾವಣೆಗಳನ್ನು ಎಸ್.ಐ.ಆರ್. ಮುಕ್ತಾಯವಾಗುವವರೆಗೆ ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.

ಮಸೀದಿ ಮತ್ತು ಕಲ್ಯಾಣ ಮಂಟಪಗಳಲ್ಲಿ ಸಾಮೂಹಿಕ ಎಸ್.ಐ.ಆರ್. ಮಾಡುತ್ತಿರುವುದರಿಂದ ಬಿ.ಎಲ್.ಓ. ಗಳು ಮನೆ ಮನೆಗೆ ತೆರಳಿ ಎಸ್.ಐ.ಆರ್. ಪ್ರಕ್ರಿಯೆ ನಡೆಸಲು ಸೂಚಿಸಬೇಕು. (ಈ ತರಹದ ಘಟನೆಗಳು ವಾಡಿ, ಶಹಾಬಾದ, ಅಫಜಲಪೂರ, ಕಲಬುರಗಿ ನಗರ ಹಾಗೂ ಇನ್ನಿತರ ಸ್ಥಳಗಳಲ್ಲಿ ನಡೆದಿರುತ್ತದೆ) ಎಂದು ತಿಳಿಸಿದರು.

ಚಿತ್ತಾಪುರ ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಸೇಡಂ ತಾಲೂಕಿನ ಶ್ರೀ ಸಿಮೆಂಟ್ ಕಂಪನಿಯರವರು ಗಣಿಗಾರಿಕೆಯಲ್ಲಿ ಕಲ್ಲುಗಳನ್ನು ಸ್ಪೋಟಿಸುತ್ತಿರುವುದರಿಂದ ಸಂಗ್ರಹವಾಗುತ್ತಿರುವ ನೀರು ರಾಸಾಯನಿಕ ಮಿಶ್ರಿತ ಕಲುಷಿತ ನೀರು ಬೋರವೆಲಗಳಲ್ಲಿ ಸೇರುತ್ತಿರುವುದರಿಂದ ಅಲ್ಲಿ ವಾಸ ಮಾಡುತ್ತಿರುವ ನಾಗರೀಕರಿಗೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿರುವುದರಿಂದ ಆರೋಗ್ಯದಲ್ಲಿ ಏರುಪೇರುಪೇರುಗಳು ಉಂಟಾಗಿ ತೊಂದರೆಗೆ ಈಡಾಗಿರುತ್ತಾರೆ. ಕೂಡಲೇ ಗುಣಮಟ್ಟದ ನೀರು ಪೂರೈಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಮಹಾನಗರ ಅಧ್ಯಕ್ಷ ತಂದು ಪಾಟೀಲ, ಶಾಸಕರಾದ ಬಸವರಾಜ ಮತ್ತಿಮುಡ, ಡಾ.ಅವಿನಾಶ್ ಜಾಧವ, ಬಿ.ಜಿ.ಪಾಟೀಲ, ಶಶೀಲ್ ಜಿ ನಮೋಶಿ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಲೂರ, ಬಾಬುರಾವ ಚವ್ಹಾಣ, ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ಸುನೀಲ ವಲ್ಯಾಪೂರೆ, ಅಮರನಾಥ ಪಾಟೀಲ, ಪ್ರಮುಖರಾದ ನಿತೀನ್ ಗುತ್ತೇದಾರ, ಶಿವರಾಜ ಪಾಟೀಲ ರದ್ದೆವಾಡಗಿ, ಅವೃಣ್ಣ ಮ್ಯಾಕೇರಿ, ಸಿದ್ದಾಜೀ ಪಾಟೀಲ, ಶೋಭಾ ಬಾಣಿ, ಬಸವರಾಜ ಬೆಣ್ಣೂರಕರ್, ಶಿವಯೋಗಿ ನಾಗನಹಳ್ಳಿ, ಮಹಾದೇವ ಬೆಳಮಗಿ, ಲಿಂಗರಾಜ ಬಿರಾದಾರ, ಉಮೇಶ ಪಾಟೀಲ ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!