ಅಕ್ರಮ ಆಸ್ತಿ ಆರೋಪ | ಜೆಸ್ಕಾಂ ಎಇಇ ಅಮೃತರಾವ್ ಲೋಕಾಯುಕ್ತ ಬಲೆಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಆದಾಯಕ್ಕೆ ಮೀರಿ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅಮೃತರಾವ್ ಯಲಾಲ್ ಅವರಿಗೆ ಸೇರಿದ ನಿವಾಸ, ಕಚೇರಿ ಹಾಗೂ ಇತರೆ ಆಸ್ತಿಗಳ ಮೇಲೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ನೇತೃತ್ವದಲ್ಲಿ ಆರು ವಿಶೇಷ ತಂಡಗಳನ್ನು ರಚಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕಲಬುರಗಿ ನಗರದ ಜಾಗೃತಿ ಕಾಲೊನಿಯಲ್ಲಿರುವ ಮನೆ, ಬಸವ ಅಪಾರ್ಟ್ಮೆಂಟ್ನ ಫ್ಲ್ಯಾಟ್, ಕೊತ್ತಂಬರಿ ಲೇಔಟ್ನಲ್ಲಿರುವ ಜೆಸ್ಕಾಂ ಕಚೇರಿ, ಜಾಗೃತಿ ಕಾಲೊನಿಯಲ್ಲಿರುವ ಸಂಬಂಧಿಕರ ಮನೆ, ಸೇಡಂ ರಸ್ತೆಯಲ್ಲಿರುವ ಪ್ಲಾಟಿನಂ ಸ್ಟುಡಿಯೋ ಹಾಗೂ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮೂಲ ನಿವಾಸ ಸೇರಿದಂತೆ ಒಟ್ಟು ಏಳು ಸ್ಥಳಗಳಲ್ಲಿ ಅಧಿಕಾರಿಗಳು ಏಕಕಾಲದಲ್ಲಿ ಶೋಧ ನಡೆಸಿದರು.
ಶೋಧ ಕಾರ್ಯಾಚರಣೆಯಲ್ಲಿ ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ಆಸ್ತಿಗಳು, ಕಲಬುರಗಿ ನಗರದ ವಿವಿಧ ಫ್ಲ್ಯಾಟ್ಗಳು, ಸುಲೇಪೇಟ್ ಭಾಗದಲ್ಲಿರುವ 20ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹಾಗೂ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಯಿತು. ಬ್ಯಾಂಕ್ ಖಾತೆಗಳ ವ್ಯವಹಾರಗಳು, ಹೂಡಿಕೆ ವಿವರಗಳು, ಆಸ್ತಿ ದಾಖಲೆಗಳು ಸೇರಿದಂತೆ ಹಲವು ಹಣಕಾಸು ಸಂಬಂಧಿತ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ಬಳಿಕ ಆಸ್ತಿ ಮೌಲ್ಯ, ಆದಾಯದ ಮೂಲ ಹಾಗೂ ಇತರೆ ಹಣಕಾಸು ವ್ಯವಹಾರಗಳ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

