ದಂಡೋತಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಅಸ್ವಸ್ಥ, ಚಿತ್ತಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು, ಆತಂಕದಲ್ಲಿ ಪಾಲಕರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಗುರುವಾರ ಸಂಜೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿದೆ. ಸುಮಾರು 40 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಾಹಾರ ಸೇವನೆಯೇ ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಾರಣ ಎಂದು ಅನುಮಾನಿಸಲಾಗಿದೆ.
ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಚಿತ್ತಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾದ ವಿಷಯ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತಿದ್ದಂತೆ ವಿಧ್ಯಾರ್ಥಿಗಳ ಪಾಲಕ ಪೋಷಕರು, ಸಾರ್ವಜನಿಕರು ಮತ್ತು ವಿವಿಧ ಪಕ್ಷಗಳ ಮುಖಂಡರು ತಂಡೋಪತಂಡವಾಗಿ ಜಮಾಯಿಸಿದ್ದರು.
ವಿಧ್ಯಾರ್ಥಿಗಳ ಆರೋಗ್ಯ ಅಸ್ವಸ್ಥರಾಗಲು ವಸತಿ ಶಾಲೆಯ ಪ್ರಾಚಾರ್ಯ, ಶಿಕ್ಷಕರ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ಕೂಡಲೇ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ತಹಸೀಲ್ದಾರ್ ನಾಗಯ್ಯ ಹಿರೇಮಠ, ಜಿಲ್ಲಾ ಆರೋಗ್ಯ ಅಧಿಕಾರಿ, ಅಲ್ಪಸಂಖ್ಯಾತರ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಮಕ್ಕಳ ವೈದ್ಯರು ಆಗಮಿಸಿ ಸಮರೋಪಾದಿಯಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ.
” ಅಸ್ವಸ್ಥಗೊಂಡ 31 ವಿದ್ಯಾರ್ಥಿಗಳನ್ನು ಚಿತ್ತಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 5 ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಹಾರ ಸುರಕ್ಷತೆ ಅಧಿಕಾರಿಗಳಿಗೆ ಕಲುಷಿತ ಆಹಾರದ ಸ್ಯಾಂಪಲ್ ಕಳುಹಿಸಲಾಗಿದ್ದು ಅದರ ವರದಿ ಬಂದ ನಂತರ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುವುದು”.-ನಾಗಯ್ಯ ಹಿರೇಮಠ ತಹಸೀಲ್ದಾರ್ ಚಿತ್ತಾಪುರ.
