ದಂಡೋತಿ ವಸತಿ ಶಾಲೆಯ ದುರ್ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹ | ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುವ ಸಚಿವರು ಅಲ್ಪಸಂಖ್ಯಾತರ ವಸತಿ ಶಾಲೆಯ ಸಮಸ್ಯೆಗಳ ಕಡೆ ಗಮನ ಹರಿಸಲಿ: ಸಜ್ಜನಶೆಟ್ಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುವ ಸಚಿವ ಪ್ರಿಯಾಂಕ್ ಖರ್ಗೆ, ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಕಿವಿಮಾತು ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಅಂತಾರಾಷ್ಟ್ರೀಯ ಬಗ್ಗೆ ಮಾತನಾಡುವುದನ್ನು ಬಿಟ್ಟು ಮೊದಲು ಮನೆ ಗೆದ್ದು ಮಾರು ಗೆಲ್ಲರಿ, ಸ್ಥಳೀಯ ಕ್ಷೇತ್ರದ ಬಗ್ಗೆ ಮಾತನಾಡಿ ಹಾಗೂ ಗಮನ ಹರಿಸಿ ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹಾರ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.
ಸಚಿವರಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ, ಹೀಗಾಗಿ ಆಡಳಿತ ಯಂತ್ರ ಕುಸಿದಿದೆ. ಸಚಿವರಿಗೆ ಚಿತ್ತಾಪುರ ಕ್ಷೇತ್ರ ಎನ್ನುವುದು ಅವರಿಗೆ ಒಂದು ಕಾಲೋನಿ ತರ ಆಗಿದೆ. ಯಾವಾಗ ಬರುತ್ತಾರೋ ಯಾವಾಗ ಬರುತ್ತಾರೋ ತಿಳಿಯದು, ಬುರ್ ಅಂತ ಬಂದು ಬುರ್ ಅಂತ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಕೆಲ ದಿನಗಳ ಹಿಂದೆ ಪಟ್ಟಣದ ಅಂಬೇಡ್ಕರ್ ಹಾಸ್ಟೆಲ್ ವಿದ್ಯಾರ್ಥಿಗಳು ತಟ್ಟೆಗಳು ಬಾರಿಸುತ್ತಾ ಪ್ರತಿಭಟಿಸಿದ್ದರು. ಈಗ ದಂಡೋತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮಸ್ಯೆ, ಇದು ಇದೇ ಮೊದಲಲ್ಲ ಪದೇ ಪದೇ ಈ ಸಮಸ್ಯೆ ಆಗಿದೆ. ಹೀಗಾಗಿ ತಾಲೂಕಿನ ಹಾಸ್ಟೆಲ್ ಗಳ ವ್ಯವಸ್ಥೆ ತೀರ ಹದಗೆಟ್ಟಿದ್ದು, ಕಳಪೆ ಹಾಗೂ ಕನಿಷ್ಠ ಮಟ್ಟದಲ್ಲಿ ಬೆಳೆ ಕಾಳು, ತರಕಾರಿ ಸರಬರಾಜು ಆಗುತ್ತಿದೆ ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ಅರೆಬೆಂದ ಅನ್ನವನ್ನು ಸೇವಿಸಿದ್ದರಿಂದ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ದಂಡೋತಿ, ಗುಂಡಗುರ್ತಿ, ಚಿತ್ತಾಪುರ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಎಲ್ಲಾ ಪ್ರಮುಖ ಅಧಿಕಾರಿಗಳು ಆಗಿಮಿಸಿದ್ದನ್ನು ನೋಡಿದರೆ ವಿಷಯದ ಗಂಭೀರತೆ ತಿಳಿಯುತ್ತದೆ ಎಂದರು.
ಮೆನು ಪ್ರಕಾರ ಊಟ ನೀಡುತ್ತಿಲ್ಲ, ಅರೆಬೆಂದ ಅನ್ನ, ಬೆಳೆ ತರಕಾರಿ ಇಲ್ಲದ ತಿಳಿ ಸಾರು, ವಾರದಿಂದ ಸ್ನಾನಕ್ಕೆ ನೀರಿಲ್ಲ ಕುಡಿಯುವುದಕ್ಕೆ ಶುದ್ಧ ನೀರಿಲ್ಲ, ಶೌಚಾಲಯ ಇಲ್ಲ, ನೀರಿನ ಟ್ಯಾಂಕ್ ನಲ್ಲಿ ಸತ್ತ ಪಾರಿವಾಳ ಪಾಚಿಗಟ್ಟಿದ ನೀರೇ ಉಪಯೋಗಿಸಬೇಕಿದೆ, ಈ ಕುರಿತು ಪ್ರಶ್ನಿಸಿದರೆ ಟಿಸಿ ಕೊಡಲಾಗುವುದು ಎಂದು ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಭಯ ಹಾಕುತ್ತಾರೆ ಎಂದು ವಿದ್ಯಾರ್ಥಿಗಳೇ ತಮ್ಮ ನೋವನ್ನು ತೋಡಿಕೊಂಡಿದ್ದಾರೆ ಎಂದು ಹೇಳಿದರು.
ತಾಲೂಕಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸಿ, ದಂಡೋತಿ ವಸತಿ ಶಾಲೆಯ ಘಟನೆಗೆ ಕಾರಣರಾದವರ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ಮಾತನಾಡಿ, ಹಾಸ್ಟೆಲ್ ನಲ್ಲಿ ಯಾರ ಮಕ್ಕಳು ಇರುತ್ತಾರೆ ಎನ್ನುವುದು ಸಚಿವರು ಮೊದಲು ತಿಳಿದುಕೊಳ್ಳಲಿ, ನಮಗೆ ಹಾಸ್ಟೆಲ್ ನಲ್ಲಿದ್ದ ಅನುಭವ ಇದೆ ಸಚಿವರಿಗೆ ಅದರ ಅನುಭವ ಇಲ್ಲ. ಇಲ್ಲಿವರೆಗೆ ಹಾಸ್ಟೆಲ್ ಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದೀರಿ ಎಂಬುದು ತಮಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರಿನಲ್ಲಿ ಕುಳಿತುಕೊಂಡು ಬರಿ ಪೇಪರ್ ಹೇಳಿಕೆ ನೀಡೋದು ಬಿಟ್ಟು ಕ್ಷೇತ್ರದ ಕಡೆ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.
ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸಚಿವರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹಾಸ್ಟೆಲ್ ನಲ್ಲಿ ಮತ್ತು ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದವರ ಮೇಲೆ ಕೇಸ್ ಹಾಕುತ್ತೇನೆ ಎಂದು ಹೇಳುವುದು ಬಿಡಿ ಇದೇನು ಬಿಹಾರ ಅಲ್ಲ ಎಂದು ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ, ಮಾಜಿ ಸದಸ್ಯ ಸುರೇಶ್ ಬೆನಕನಳ್ಳಿ, ಎಸ್ಟಿ ಮೋರ್ಚಾ ಅಧ್ಯಕ್ಷ ರಾಜು ದೊರೆ, ವಕ್ತಾರ ಶಿವರಾಮ್ ಚವ್ಹಾಣ, ಅಂಬರೀಷ್ ರಂಗನೂರ ಇದ್ದರು.
“ಯಾವಾಗಲೂ ಬುದ್ಧ, ಬಸವ, ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಸಚಿವರು, ಏನಾದರೂ ಕರ್ತವ್ಯ ಬದ್ಧತೆ ಇದ್ದರೆ ಮೊದಲು ವಿದ್ಯಾರ್ಥಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿ”.-ಬಸವರಾಜ ಬೆಣ್ಣೂರಕರ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

