ಡಿಎವಿ ಓರಿಯಂಟ್ ಜ್ಞಾನ ಮಂದಿರ ಶಾಲೆಯಲ್ಲಿ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದ ಡಿ.ಎ.ವಿ. ಓರಿಯಂಟ್ ಜ್ಞಾನ ಮಂದಿರ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಲ್ಎಂಸಿ ಚೇರ್ಮನ್ ಹಾಗೂ ಅದಾನಿ ಸಿಮೆಂಟ್ ಘಟಕ ಮುಖ್ಯಸ್ಥ ಅಜಯ್ ಶರ್ಮ ಮಾತನಾಡಿ, ‘ವಿಕಸಿತ ಭಾರತ’ ನಿರ್ಮಾಣದಲ್ಲಿ ಯುವಜನರ ಶಕ್ತಿ ಮತ್ತು ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಸುಪ್ರಿಯಾ ಅಧ್ಯಕ್ಷರು ಸ್ಪೂರ್ತಿ ಕ್ಲಬ್, ರೋಹಿತ್ ಜೋಷಿ, ಎಲ್.ಎಂ.ಸಿ. ಸದಸ್ಯರು ಹಾಗೂ ಮಾನವ ಸಂಪನ್ಮೂಲ ಅಧಿಕಾರಿ, ಅದಾನಿ ಸಿಮೆಂಟ್, ಚಿತ್ತಾಪುರ ಮತ್ತು ಶಾಲೆಯ ಪ್ರಾಂಶುಪಾಲ ಗಾಜುಲ ಜ್ಯೋತಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ದೇಶಭಕ್ತಿಯನ್ನು ಬಿಂಬಿಸುವಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನರ್ಸರಿ ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಧರಿಸಿ ಗಮನ ಸೆಳೆದರು. ದಂಡಿ ಸತ್ಯಾಗ್ರಹ ನಾಟಕ, ಸಂಗೊಳ್ಳಿ ರಾಯಣ್ಣ ಏಕಪಾತ್ರಾಭಿನಯ, ‘ವಿಕಸಿತ ಭಾರತ’ ನಾಟಕ ಹಾಗೂ ತ್ರಿವರ್ಣ ಧ್ವಜದ ಮಹತ್ವ ಕುರಿತ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಇದೇ ಸಂದರ್ಭದಲ್ಲಿ 2025–26ನೇ ಸಾಲಿನ ಸಿ.ಬಿ.ಎಸ್.ಇ. 10ನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಥಮ ಶ್ರೇಣಿ ಪಡೆದ ಕು. ಶರಣ್ ಪುಷ್ಪರಾಜ್ ಮಾಡಬೂಳಕರ್, ದ್ವಿತೀಯ ಶ್ರೇಣಿ ಪಡೆದ ಗಿರೀಶ್ ಮಲ್ಲಿಕಾರ್ಜುನ ಸಜ್ಜನ್, ತೃತೀಯ ಶ್ರೇಣಿ ಪಡೆದ ಅಫರಾಜ್ ನಿಸಾರ್ ಅಹಮದ್ ಹಾಗೂ ಕನ್ನಡ ವಿಷಯದಲ್ಲಿ 100/100 ಅಂಕಗಳನ್ನು ಪಡೆದ ಅಕ್ಷತಾ ಮಲ್ಲಪ್ಪ ತಳವಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಯುವಜನರಲ್ಲಿ ದೇಶ ನಿರ್ಮಾಣದ ಹೊಣೆಗಾರಿಕೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ನಡೆದ ಈ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

