ಚಿತ್ತಾಪುರ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಸೆ.3 ರಂದು ಬೃಹತ್ ಪ್ರತಿಭಟನೆ: ಸಜ್ಜನಶೆಟ್ಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಹಾಗೂ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಮತ್ತು ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಸೆ.3 ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30 ಕ್ಕೆ ಚಿತ್ತಾವಲಿ ವೃತ್ತದಿಂದ ಪ್ರಾರಂಭವಾಗುವ ಪ್ರತಿಭಟನೆ ಮೆರವಣಿಗೆ ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಲಾಡ್ಜಿಂಗ್ ಕ್ರಾಸ್ ಹತ್ತಿರ ಸಮಾವೇಶಗೊಂಡು ಪ್ರತಿಭಟನೆ ನಡೆಸಲಾಗುವುದು ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರ ಈಗಾಗಲೇ 101 ತಾಲೂಕುಗಳು ಬಲಗಾಲ ಪೀಡಿತ ಎಂದು ಘೋಷಣೆ ಮಾಡಿದೆ ಆದರೆ ಇದರಲ್ಲಿ ಕಲಬುರಗಿ ಜಿಲ್ಲೆಯನ್ನು ಸಂಪೂರ್ಣ ಕೈಬಿಡಲಾಗಿದೆ ಇದಕ್ಕೆ ಅಧಿಕಾರಿಗಳ ತಪ್ಪು ಮಾಹಿತಿ ಕಾರಣ. ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಠಿಕಾಣಿ ಹೂಡಿರುವ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲೆಯಲ್ಲೇ ಡಿಎಪಿ ಕಾಳಸಂತೆಯಲ್ಲಿ ಮಾರಾಟ ನಡೆಯುತ್ತಿದೆ ಹೀಗಾಗಿ ಈ ಬಾರಿ ಡಿಎಪಿಗಾಗಿ ರೈತರು ಪರದಾಡುವಂತಾಯಿತು ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಮೇಶ್ ಬೊಮ್ಮನಳ್ಳಿ ಮಾತನಾಡಿ, ಕಳೆದ ವರ್ಷ ಹಸಿ ಬರಗಾಲ ಈ ವರ್ಷ ಒಣ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ವಂತ ಜಮೀನು ಇದ್ದವರು ಹಾಗೂ ಲೀಸ್ ಗೆ ಹಾಕಿಕೊಂಡ ರೈತರು ತುಂಬಾ ನಷ್ಟವನ್ನು ಅನುಭವಿಸಿದ್ದಾರೆ ಹೀಗಿರುವಾಗ ಇಲ್ಲಿನ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಇಟಗಿ, ಪುರಸಭೆ ಮಾಜಿ ಸದಸ್ಯರಾದ ನಾಗರಾಜ ಭಂಕಲಗಿ, ಸುರೇಶ್ ಬೆನಕನಳ್ಳಿ, ದಶರಥ ದೊಡ್ಡಮನಿ, ಮುಖಂಡರಾದ ಶೈಲುಗೌಡ ದಿಗ್ಗಾಂವ, ಸಂಗಮೇಶ ಪಾಟೀಲ ಇದ್ದರು.

