ಅಟೋ ಚಾಲಕರ ಸಂಘದಿಂದ ದಿ.ಶಂಕರನಾಗ್ ಪುಣ್ಯಸ್ಮರಣೆ | ಆಟೋಗಳ ಮೇಲೆ ಶಂಕರನಾಗ್ ಭಾವಚಿತ್ರ ಅಂಟಿಸಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಟೋ ಚಾಲಕರಿಗೆ ಘನತೆ ಗೌರವ ತಂದುಕೊಟ್ಟ ದಿ.ಶಂಕರನಾಗ್ ಅವರನ್ನು ಸ್ಮರಿಸುವ ಮೂಲಕ ಎಲ್ಲಾ ಚಾಲಕರು ತಮ್ಮ ಅಟೋ ಮೇಲೆ ಶಂಕರನಾಗ್ ಅವರ ಭಾವಚಿತ್ರವನ್ನು ಅಂಟಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಸುರೇಶ್ ಬೆನಕನಳ್ಳಿ ಕರೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣದ ಅಟೋ ಸ್ಟ್ಯಾಂಡ್ ಹತ್ತಿರ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಆಟೋ ರಾಜಾ ದಿ.ಶಂಕರನಾಗ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಂಕರನಾಗ್ ಅವರು ಅಗಲಿ 35 ವರ್ಷಗಳಾದರೂ ಅವರು ಅಭಿನಯಿಸಿದ ಚಲನಚಿತ್ರಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ, ಹೀಗಾಗಿ ಅವರ ನಡೆನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷ ಲಕ್ಷ್ಮೀಕಾಂತ್ ತಾಂಡೂರಕರ್ ಮಾತನಾಡಿ, ಅಟೋ ಚಾಲಕರಿಗೆ ಚಿತ್ರನಟ ದಿ.ಶಂಕರನಾಗ್ ಆದರ್ಶರಾಗಿದ್ದಾರೆ. ಅಟೋ ಚಾಲಕರ ಬಗ್ಗೆ ಕಾಳಜಿ ಹಾಗೂ ಗೌರವ ಹೊಂದಿದ್ದ ಏಕೈಕ ನಾಯಕರಾಗಿದ್ದರು ಎಂದು ಹೇಳಿದರು.
ಶಂಕರನಾಗ್ ಅಭಿಮಾನಿ ಬಳಗದ ಅಧ್ಯಕ್ಷ ನಾಗೇಶ್ ಬಿ ಕಾಶಿ ಮಾತನಾಡಿ, ಅಟೋ ಚಾಲಕರು ಸಮಾಜ ಸೇವಕರಾಗಿದ್ದು, ಪ್ರಯಾಣಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಈ ನಿಟ್ಟಿನಲ್ಲಿ ಶಂಕರನಾಗ್ ಅವರ ಭಾವಚಿತ್ರವನ್ನು ಅಟೋಗಳ ಮೇಲೆ ಅಂಟಿಸುವ ಮೂಲಕ ಸ್ಮರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಟೋ ಚಾಲಕರಾದ ಸಿದ್ದಪ್ಪ ಗಾಂಧಿ, ಮುನಿಯಪ್ಪ ಬಾಗೋಡಿ, ವಿಠ್ಠಲ್ ಕಟ್ಟಿಮನಿ, ಯಲ್ಲಪ್ಪ ಕಾಶಿ, ಅಂಬರೀಶ್ ಭೋವಿ, ರಾಜು ಕಾಶಿ, ಸುಭಾಷ್ ಕಾಶಿ, ದೇವು ಕೊನೇಮನಿ, ಭಾರತ್ ಕಾಶಿ, ಸುನಿಲ್ ಮೋಗಲಿ, ರಾಜು ಭಜಂತ್ರಿ, ಅಂಬು ಭೋವಿ, ಶ್ರೀಶೈಲ್, ಬಾಬು ಕಾಶಿ, ಸಂತೋಷ್ ಪೂಜಾರಿ, ರಮೇಶ್ ಕಾಳನೂರ, ಸುಭಾಷ್ ಗುತ್ತೇದಾರ ಸೇರಿದಂತೆ ಇತರರು ಇದ್ದರು.

