ಚಿತ್ತಾಪುರ ತಹಸೀಲ್ದಾರ್ ಗೆ ಮನವಿ ಸಲ್ಲಿಕೆ | ಕಲಬುರಗಿ ಹೈಕೋರ್ಟ್ ವೃತ್ತದಲ್ಲಿ ದಿ.ವಿಠಲ್ ಹೇರೂರ ಮೂರ್ತಿ ಸರ್ಕಾರವೇ ಸ್ಥಾಪನೆ ಮಾಡುವಂತೆ ಕೋಲಿ ಸಮಾಜ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರಗಿ ನಗರದಲ್ಲಿನ ಹೈಕೋರ್ಟ್ ಹತ್ತಿರ ಅಫಜಲಪುರಕ್ಕೆ ಸಂಪರ್ಕಿಸುವ ವೃತ್ತದಲ್ಲಿ ಕೋಲಿ, ಕಬ್ಬಲಿಗ ಸಮಾಜದ ನಾಯಕ, ಹೋರಾಟಗಾರ ದಿ.ವಿಠಲ್ ಹೇರೂರ ಅವರ ಮೂರ್ತಿಯನ್ನು ಸರ್ಕಾರವೇ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ ನೇತೃತ್ವದಲ್ಲಿ ಮುಖಂಡರು ಪ್ರತಿಭಟಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಗುರುವಾರ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಕೋಲಿ, ಕಬ್ಬಲಿಗ ಸಮಾಜವನ್ನು ಸಂಘಟಿಸಿದ ಸಂಘಟನಾಕಾರ, ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಿಸಲು ತಮ್ಮ ಜೀವನವೇ ಪಣವಾಗಿಟ್ಟು ಕೊನೆ ಉಸುರಿನ ತನಕ ಹೋರಾಟ ನಡೆಸಿದ ಧೀಮಂತ ಹೋರಾಟಗಾರ, ಸರ್ವ ಸಮಾಜಗಳ ಪ್ರೀತಿ, ವಿಶ್ವಾಸ ಗಳಿಸಿದ ಸಾಮಾಜಿಕ ಹೋರಾಟಗಾರ ಕೋಲಿ, ಕಬ್ಬಲಿಗ ಸಮಾಜದ ನೇತಾರ ದಿ.ವಿಠಲ್ ಹೇರೂರ ಜೀ ಅವರ ಮೂರ್ತಿಯನ್ನು ಕಲಬುರಗಿ ನಗರದಲ್ಲಿರುವ ಹೈಕೋರ್ಟ್ ಸಮೀಪದಲ್ಲಿರುವ ಅಫಜಲಪುರಕ್ಕೆ ಸಂಪರ್ಕಿಸುವ ವೃತ್ತದಲ್ಲಿ ಸರ್ಕಾರದಿಂದ ಸ್ಥಾಪಿಸಬೇಕು ಅಥವಾ ಮೂರ್ತಿ ಸ್ಥಾಪನೆ ಮಾಡಿಕೊಳ್ಳಲು ಸಮಾಜಕ್ಕೆ ಸರ್ಕಾರದಿಂದ ಅಧಿಕೃತವಾಗಿ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ 2013 ರಿಂದ ಸದರಿ ವೃತ್ತದಲ್ಲಿ ದಿ.ವಿಠಲ್ ಹೇರೂರ ಅವರ ಭಾವಚಿತ್ರವುಳ್ಳ ನಾಮಫಲಕ ಹಾಕಿ ಪ್ರತಿ ವರ್ಷ ಪುಣ್ಯಸ್ಮರಣೆ, ಜಯಂತಿ, ಅನ್ನದಾಸೋಹ, ಪೂಜಾ ಕಾರ್ಯಕ್ರಮ ಮಾಡುತ್ತಾ ಬರಲಾಗುತ್ತಿದೆ. ಸದರಿ ವೃತ್ತವು ಈಗಾಗಲೇ ದಿ.ವಿಠಲ್ ಹೇರೂರ ವೃತ್ತ ಎಂದು ಪ್ರಸಿದ್ಧಿಯಾಗಿದೆ. ಆದರೆ, ಸದರಿ ವೃತ್ತದಲ್ಲಿ ಕುರುಬ ಸಮಾಜದ ಕೆಲವರು ರಾತೋರಾತ್ರಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಮೂರ್ತಿ ಇಟ್ಟಿದ್ದನ್ನು ಮಹಾನಗರ ಪಾಲಿಕೆ ಆಡಳಿತ ತಕ್ಷಣ ಸ್ಥಳದಿಂದ ತೆರವುಗೊಳಿಸಿದೆ. ಒಂದು ಸಮಾಜದ ನಾಯಕನ ಹೆಸರಲ್ಲಿ ನಾಮಫಲಕ ಹಾಕಿದ್ದನ್ನು ಗೊತ್ತಿದ್ದರೂ ಮೂರ್ತಿ ತಂದು ಕೂಡಿಸಿದ್ದು ಕೋಲಿ, ಕಬ್ಬಲಿಗ ಸಮಾಜಕ್ಕೆ ಅವಮಾನಿಸುವ, ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತರುವ, ದಿ.ವಿಠಲ್ ಹೇರೂರ ಅವರಿಗೆ ಅವಮಾನಿಸುವ ಕೆಲಸ ಮಾಡಲಾಗಿದೆ. ಇದನ್ನು ಸಮಾಜವು ಎಂದಿಗೂ ಸಹಿಸುವುದಿಲ್ಲ. ಸದರಿ ವೃತ್ತದಲ್ಲಿ ದಿ.ವಿಠಲ್ ಹೇರೂರ ಅವರ ಮೂರ್ತಿ ಹೊರತುಪಡಿಸಿ ಬೇರೆ ಯಾರದ್ದೆ ಮೂರ್ತಿ ಕೂಡಿಸಲು ಬಿಡುವುದಿಲ್ಲ. ಸಮಾಜದ ಘನತೆ, ಗೌರವ, ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಯಾರೆ ಮಾಡಿದರೂ ಅದನ್ನು ಸಹಿಸುವುದಿಲ್ಲ ಮತ್ತು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ದಿ.ವಿಠಲ್ ಹೇರೂರ ಅವರ ನಾಮಫಲಕ ಇರುವ ವೃತ್ತದಲ್ಲಿಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂರ್ತಿ ಸ್ಥಾಪನೆಗೆ ವಿರೋಧಿಸುತ್ತೇವೆ ಮತ್ತು ಸಮಾಜವು ತೀವ್ರವಾಗಿ ಆಕ್ಷೇಪಿಸುತ್ತದೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು ಅದೇ ಸ್ಥಳದಲ್ಲಿಯೇ ಮೂರ್ತಿ ಸ್ಥಾಪನೆಗೆ ಪಟ್ಟು ಹಿಡಿಯುವುದು, ಹೋರಾಟ ಮಾಡುವುದು ಸರಿಯಲ್ಲ. ಅಂತಹ ಹೋರಾಟದ ಕೆಲಸ ಮಾಡುವುದು ಕೋಲಿ, ಕಬ್ಬಲಿಗ ಸಮಾಜಕ್ಕೆ ಹೊಸದೇನಲ್ಲ. ಕಲ್ಯಾಣ ಕರ್ನಾಟಕದ ಕೋಲಿ, ಕಬ್ಬಲಿಗ ಸಮಾಜವು ಕಲಬುರಗಿ ನಗರದಲ್ಲಿ ಸೇರಿ ಉಗ್ರ ಹೋರಾಟ ಮಾಡಲು ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.
ಸರ್ಕಾರವು ಕುರುಬ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೂರ್ತಿ ಮೂರ್ತಿ ಸ್ಥಾಪನೆಗೆ ಅವಕಾಶ ಮಾಡಿಕೊಡಬಾರದು. ಕೋಲಿ, ಕಬ್ಬಲಿಗ ಸಮಾಜದ ಮನವಿ ಕಡೆಗಣಿಸಿದರೆ ಸಮಾಜವು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಮುಖಂಡರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಗೌರವಾಧ್ಯಕ್ಷ ರಾಮಲಿಂಗ ಬಾನರ್, ಪ್ರಧಾನ ಕಾರ್ಯದರ್ಶಿ ಕರಣಕುಮಾರ ಅಲ್ಲೂರ, ನಗರಾಧ್ಯಕ್ಷ ಪ್ರಭು ಹಲಕರ್ಟಿ, ಮುಖಂಡರಾದ ಭೀಮಣ್ಣ ಹೊತಿನಮಡಿ, ಶರಣಪ್ಪ ನಾಶಿ, ಬಸವರಾಜ ಚಿನ್ನಮಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ, ಲಕ್ಷ್ಮೀಕಾಂತ ಸಾಲಿ, ಮುನಿಯಪ್ಪ ಕೊಳ್ಳಿ, ಚಂದ್ರು ಕಾಳಗಿ, ದೇವಿಂದ್ರ ಅರಣಕಲ್, ದತ್ತು ಮೈನಾಳಕರ್, ರಾಜು ಮುಧೋಳ, ಶರಣಪ್ಪ ಸಿದ್ರಾಮಗೋಳ, ಮಾರುತಿ ಇವಣಿ, ಶಿವಪ್ಪ ದೊಡ್ಡಮನಿ, ದಶರಥ ದೊಡ್ಡಮನಿ, ಮಲ್ಲು ಕೊಳಕೋರ ಸೇರಿದಂತೆ ಇತರರು ಇದ್ದರು.

