Oplus_0

ಕಲಬುರಗಿಯಲ್ಲಿ ಈಡಿಗರ ಅಕ್ಕಮ್ಮ- ಶರಣ ಹೆಂಡದ ಮಾರಯ್ಯ ಸ್ಮರಣೋತ್ಸವಕ್ಕೆ ಸಿದ್ಧತೆ | ನ.2ಕ್ಕೆ ಸ್ಮರಣೋತ್ಸವ ಹಾಗೂ ಈಡಿಗ ಮಹಾಮಂಡಳಿ ಸಮಿತಿ ಪದಗ್ರಹಣ: ಪ್ರಣವಾನಂದ ಶ್ರೀ 

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: 12ನೇ ಶತಮಾನದಲ್ಲಿ ಶರಣ ಪರಂಪರೆಯಲ್ಲಿ ಬೆಳೆದ ಈಡಿಗರ ಅಕ್ಕಮ್ಮ ಹಾಗೂ ಶರಣ ಹೆಂಡದ ಮಾರಯ್ಯ ವಚನಗಳ ಪ್ರಚಾರಕ್ಕಾಗಿ ಹಾಗೂ ಈಡಿಗ ಮಹಾಮಂಡಳಿಯ ಕಲಬುರಗಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ. 2ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಕರದಾಳ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಡಾ.ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು.

ನಗರದ ಹೋಟೆಲ್ ಆಮಂತ್ರಣ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವ್ಯಾಪ್ತಿಯ ವಿವಿಧ ತಾಲೂಕುಗಳ ಈಡಿಗ ಸಮಾಜ ಮುಖಂಡರ ಚಿಂತನಾ ಸಭೆಯಲ್ಲಿ ಮಾತನಾಡಿ, ನವೆಂಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ನಾಗನಹಳ್ಳಿ ಸರ್ಕಲ್ ಬಳಿಯ ಹೋಟೆಲ್ ಬೃಂದಾವನ ಗ್ರಾಂಡ್ ನ ಬಲದೇವ್ ಸಭಾಂಗಣದಲ್ಲಿ 12ನೇ ಶತಮಾನದ ಅನುಭವ ಮಂಟಪದಲ್ಲಿ ವಿಶ್ವಗುರು ಬಸವಣ್ಣನವರ ಜೊತೆಯಿದ್ದ ಶರಣ ಸಂಕುಲದ ಹೆಂಡದ ಮಾರಯ್ಯನ 12 ವಚನಗಳು ಹಾಗೂ ಯಾದಗಿರಿ ಜಿಲ್ಲೆಯ ಎಲೇರಿ ಗ್ರಾಮದ ಆಚಾರದ ಶರಣೆ ಈಡಿಗರ ಅಕ್ಕಮ್ಮಳ 154 ವಚನಗಳ ಕುರಿತಾಗಿ ಇಬ್ಬರು ವಿದ್ವಾಂಸರು ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮದಲ್ಲಿ ಈಡಿಗ ಸಮಾಜದ ಮುಂದಾಳುಗಳಾದ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಮತ್ತು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ. ನಂತರ ಕಲಬುರಗಿ ಜಿಲ್ಲೆ ಈಡಿಗ ಮಹಾಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕೂಡ ನಡೆಯಲಿದೆ ಎಂದು ಸ್ವಾಮೀಜಿ ಹೇಳಿದರು.

ಈಡಿಗರ ಅಕ್ಕಮ್ಮ ಹೆಸರಿನಲ್ಲಿ ಸಹಕಾರಿ ಬ್ಯಾಂಕ್ ಆರಂಭ:

ರಾಜ್ಯದಲ್ಲಿ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಆರ್ಥಿಕ, ಸಾಮಾಜಿಕ ಬಲಿಷ್ಠತೆಯನ್ನು ಕಂಡುಕೊಳ್ಳಲು ರಾಜ್ಯಮಟ್ಟದ ಈಡಿಗರ ಅಕ್ಕಮ್ಮ ಸಹಕಾರಿ ಬ್ಯಾಂಕ್ ಆರಂಭಗೊಳ್ಳಲು ಈಗಾಗಲೇ ನೋಂದಾವಣೆ ಮಾಫಿ ಅನುಮತಿ ಲಭ್ಯವಾಗಿದ್ದು, ಶೇರು ಸಂಗ್ರಹ ಕೂಡ ಮಾಡಲಾಗುತ್ತಿದೆ. ಎಲ್ಲ ತಾಲೂಕುಗಳ ಈಡಿಗ ಸಮುದಾಯದ ಬಂಧುಗಳು ಸದಸ್ಯತ್ವವನ್ನು ನೋಂದಾಯಿಸಿಕೊಂಡು ಸದೃಢ ಬ್ಯಾಂಕ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಸಮುದಾಯದ ಜನರ ಆರ್ಥಿಕ ಅಭಿವೃದ್ಧಿಗಾಗಿ ಗೃಹ ಸಾಲ, ಶಿಕ್ಷಣ ಸಾಲ, ಉದ್ಯೋಗ ಸಾಲ ಆರಂಭಿಸಲಾಗುವುದು. ಸ್ವಸಹಾಯ ಗುಂಪುಗಳ ರಚನೆ ಮಾಡಲಾಗುವುದು. ಇದಕ್ಕಾಗಿ ರಾಜ್ಯಾದ್ಯಂತ ಶೇರು ಸಂಗ್ರಹ ಕಾರ್ಯ ಭರದಿಂದ ನಡೆಯುತ್ತಿದೆ. ಕಲಬುರಗಿ ಜಿಲ್ಲೆಯಲ್ಲೂ ಬ್ಯಾಂಕ್ ಬಗ್ಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.

ಮರೆತು ಹೋದ ಶರಣರ ಸ್ಮರಣೆ: 

ಕಾರ್ಯಕ್ರಮದಲ್ಲಿ ಶಕ್ತಿ ಪೀಠದ ಮಾಧ್ಯಮ ಸಂಚಾಲಕ ಡಾ. ಸದಾನಂದ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಈಡಿಗ ಸಮುದಾಯದ ಶರಣ ಹೆಂಡದ ಮಾರಯ್ಯನವರು ಮಹತ್ವದ 12 ವಚನಗಳನ್ನು ಬರೆದು ಅನಾಮಿಕರಾಗಿಯೇ ಉಳಿದಿದ್ದಾರೆ ಹಾಗೂ ಆಚಾರದ ಶರಣೆ ಈಡಿಗರ ಅಕ್ಕಮ್ಮಳ 154 ವಚನಗಳನ್ನು ರಚಿಸಿದ್ದರೂ ಬೆಳಕಿಗೆ ಬರಲಿಲ್ಲ. ಈ ಶರಣರ ಚಿಂತನೆಗಳನ್ನು ಜನಮಾನಸಕ್ಕೆ ಮುಟ್ಟಿಸಲು ನಿರ್ಧರಿಸಲಾಗಿದೆ. ಅನಾಮಧೇಯರಾಗಿ ಉಳಿದ ನಮ್ಮ ಸಮಾಜದ ಶರಣರ ಕಾಯಕದ ಈ ಸ್ಮರಣೋತ್ಸವ ನಿಜಕ್ಕೂ ಈಡಿಗ ಸಮುದಾಯದ ಜನರಿಗೆ ಹೆಮ್ಮೆ ತರುವಂತಹ ವಿಷಯವಾಗಿದೆ. ಜೊತೆಗೆ ಈಡಿಗರ ಅಕ್ಕಮ್ಮನ ಹೆಸರಿನಲ್ಲಿ ಸಹಕಾರಿ ಬ್ಯಾಂಕ್ ಅಸ್ತಿತ್ವಕ್ಕೆ ಬರುವುದು ಸಮುದಾಯಕ್ಕೆ ಆರ್ಥಿಕ ಚೈತನ್ಯವನ್ನು ತುಂಬಿಕೊಡಲಿದೆ ಎಂದು ಹೇಳಿದರು.

ಸಭೆಯಲ್ಲಿ ವೆಂಕಟೇಶ ಗುಂಡಾನೂರ, ಸುರೇಶ್ ಗುತ್ತೇದಾರ, ಮಹೇಶ್ ಗುತ್ತೇದಾರ ಹೊಳಕುಂದ, ಮಲ್ಲಿಕಾರ್ಜುನ ಆರ್ ಕುಕ್ಕುಂದಿ, ಶಿವರಾಜ್ ಜೇವರ್ಗಿ, ಸುರೇಶ ಕರದಾಳ, ಶಾಂತಯ್ಯ, ಭೀಮಯ್ಯ ಶಹಾಬಾದ್, ಶಿವಣ್ಣ ನಾಲವಾರ, ನರಸಯ್ಯ ಕರದಾಳ, ಬಸವರಾಜ್ ರಾವೂರ್, ರುಕ್ಮಯ್ಯ ಯಳವಂತಗಿ, ಶ್ರೀನಿವಾಸ ತೇಲಂಗ, ಬಿ.ಎಂ. ರಾವೂರ್, ನಾಗರಾಜ್ ಆರ್ ಗುತ್ತೇದಾರ, ರಾಮಯ್ಯ ಬಿ ಅಲ್ದಿಹಾಳ, ರಮೇಶ್ ಗುತ್ತೇದಾರ, ಮಂಜುನಾಥ ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಾಧಕರಿಗೆ ವಿಶೇಷ ಗೌರವ ಪ್ರಶಸ್ತಿ: 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಈಡಿಗ ಸಮಾಜದ ಪ್ರಗತಿಗಾಗಿ ಶ್ರಮವಹಿಸಿದ 50 ಮಂದಿ ಪುರುಷ ಹಾಗೂ ಮಹಿಳಾ ಸಾಧಕರಿಗೆ ಶರಣ ಹೆಂಡದ ಮಾರಯ್ಯ ಮತ್ತು ಈಡಿಗರ ಅಕ್ಕಮ್ಮ ಹೆಸರಿನಲ್ಲಿ ವಿಶೇಷ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಮುದಾಯದ 400ಕ್ಕೂ ಹೆಚ್ಚು ಜನ ಭಾಗವಹಿಸಲು ನಿರ್ಧರಿಸಲಾಯಿತು.

Spread the love

Leave a Reply

Your email address will not be published. Required fields are marked *

You missed

error: Content is protected !!