ಮಾದಿಗ ಸಂಘಟನೆಗಳ ಒಕ್ಕೂಟ ಆಕ್ರೋಶ | ದಲಿತರ ಮೇಲಿನ ದೌರ್ಜನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಹಣಮಂತ ಇಟಗಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾದಿಗ ಹಾಗೂ ಇತರ ದಲಿತ ಸಮುದಾಯಗಳ ಮೇಲೆ ಜಾತಿ ಆಧಾರಿತ ದೌರ್ಜನ್ಯ, ಹಲ್ಲೆ, ಅವಮಾನ ಮತ್ತು ಅಸ್ಪೃಶ್ಯತೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಮಾದಿಗ ಸಂಘಟನೆಗಳ ಒಕ್ಕೂಟವು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖಂಡ ಹಣಮಂತ ಇಟಗಿ ಮಾತನಾಡಿ, ಇತ್ತೀಚೆಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಭಾಗದಲ್ಲಿ ದಲಿತ ವ್ಯಕ್ತಿಗೆ ಪ್ರತ್ಯೇಕ ರೀತಿಯಲ್ಲಿ ನೀರು ನೀಡಿದ ಆರೋಪದ ಪ್ರಕರಣದಲ್ಲಿ ಪೊಲೀಸರು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದಲ್ಲಿಯೂ ದಲಿತ ಕುಟುಂಬದ ಮೇಲೆ ಹಲ್ಲೆ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನವಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದೂರು ನೀಡಿದ ಸಂತ್ರಸ್ತರಿಗೆ ರಕ್ಷಣೆ, ಪ್ರಕರಣಗಳ ತ್ವರಿತ ತನಿಖೆ ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇತ್ತೀಚಿನ ಪ್ರಕರಣಗಳಲ್ಲಿ ದಲಿತ ಸಂಘಟನೆಗಳು ತ್ವರಿತ ನ್ಯಾಯ ಹಾಗೂ ಪರಿಣಾಮಕಾರಿ ಪೊಲೀಸ್ ಕ್ರಮಕ್ಕೆ ಒತ್ತಾಯಿಸುತ್ತಿವೆ. ರಾಯಚೂರು ಜಿಲ್ಲೆಯ ದಲಿತ ಮಹಿಳೆ ಸಾವಿನ ಪ್ರಕರಣದಲ್ಲಿಯೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದವು ಎಂದು ಮಾಹಿತಿ ನೀಡಿದರು.
ಸಂವಿಧಾನ ನೀಡಿರುವ ಸಮಾನತೆ ಮತ್ತು ಗೌರವದ ಹಕ್ಕು ಪ್ರತಿಯೊಬ್ಬರಿಗೂ ಸಿಗಬೇಕು. ಜಾತಿ ಆಧಾರಿತ ದೌರ್ಜನ್ಯಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಗೃಹ ಇಲಾಖೆ ಈ ಕುರಿತು ಗಂಭೀರವಾಗಿ ಪರಿಗಣಿಸಿ ಜಿಲ್ಲಾಮಟ್ಟದಲ್ಲಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆ, ದಾಖಲೆ ನಿರ್ವಹಣೆ ಹಾಗೂ ಪ್ರಕರಣಗಳ ಪ್ರಗತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಗೃಹ ಸಚಿವರು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ವರದಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಮೇತ್ರಿ ನಾಯ್ಕಲ್, ಶಿವರಾಜ ದಾಸನಕೇರಿ, ಅನೀಲ್ ಕುಮಾರ್ ಕರಾಟೆ, ಚಂದ್ರಶೇಖರ ಕಡೆ ಸೂರ್ ಉಪಸ್ಥಿತರಿದ್ದರು..

