ಅಧಿಕಾರ ದುರಪಯೋಗ, ಸರ್ಕಾರಿ ಆದೇಶ ಉಲ್ಲಂಘನೆಗೆ ಆಕ್ರೋಶ | ಚಿತ್ತಾಪುರ ತಾಲೂಕಿನಲ್ಲಿ ನೀಡಿದ ಸುಳ್ಳು ಎಸ್ಟಿ ಪ್ರಮಾಣ ಪತ್ರಗಳು ರದ್ದುಪಡಿಸುವಂತೆ ಮಹರ್ಷಿ ವಾಲ್ಮೀಕಿ ಸಮಾಜ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡದ ನಾಯ್ಕಡ, ನಾಯಕ, ತಳವಾರ ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಬಾರದು ಹಾಗೂ ತಾಲೂಕಿನಲ್ಲಿ ನೀಡಿರುವ ಸುಳ್ಳು ಎಸ್ಟಿ ನಾಯ್ಕಡ, ನಾಯಕ, ತಳವಾರ ಜಾತಿ ಪ್ರಮಾಣ ಪತ್ರಗಳು ರದ್ದುಪಡಿಸಿಬೇಕು ಮತ್ತು ಗೊಂಡಾ ಕುರುಬ ಜಾತಿ ಪ್ರಮಾಣ ಪತ್ರಗಳು ತೆಗೆದುಕೊಂಡಿದ್ದು ಕಂಡು ಬರುತ್ತಿದೆ. ಅದನ್ನು ರದ್ದುಪಡಿಸಿ ಹೈಕೋರ್ಟ ಮತ್ತು ಸರ್ಕಾರದ ಆದೇಶಗಳನ್ನು ಪಾಲನೆ ಮಾಡಬೇಕು ಆಗ್ರಹಿಸಿ ಮಹರ್ಷಿ ವಾಲ್ಮೀಕಿ ಸಮಾಜ ತಾಲೂಕು ಅಧ್ಯಕ್ಷ ಭೀಮರಾಯ ಬಿ.ದೊರಿ ನೇತೃತ್ವದಲ್ಲಿ ಮುಖಂಡರು ಬುಧವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
19 ಮಾರ್ಚ್ 2020 ರಂದು ಭಾರತದ ಸಂವಿಧಾನದ The Constitution (Scheduled Tribes) Order (Amendment) Act 2020 ರಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡದ ಕ್ರ.ಸಂ.38 ರಲ್ಲಿರುವ ನಾಯ್ಕಡ, ನಾಯಕ, ಚೋಳ ನಾಯಕ, ಕಪಾಡಿಯಾ ನಾಯಕ, ಮೋಟಾ ನಾಯಕ, ನಾನಾ ನಾಯಕ, ನಾಯ್ಕ ನಾಯಕ, ಬೇಡ, ಬೇಡರ ಮತ್ತು ವಾಲ್ಮೀಕಿ ಜಾತಿಗಳ ಜೊತೆಗೆ ಅದೇ ಜಾತಿಯ ಪರಿವಾರ ಮತ್ತು ತಳವಾರ ಜಾತಿಗಳಿಗೆ ಪರಿಶಿಷ್ಟ ಪಂಗಡದ ಸೌಲಭ್ಯಗಳನ್ನು ವಿಸ್ತರಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯವರು ಅಧಿಕೃತವಾದ ಆದೇಶವನ್ನು ಹೊರಡಿಸಿರುತ್ತಾರೆ. ಸದರಿ ಸರ್ಕಾರದ ಆದೇಶಗಳ ಅನ್ವಯ ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ ತಳವಾರ ಜಾತಿಯವರಿಗೆ ಯಾವುದೇ ಕಾರಣಕ್ಕೂ ಎಸ್.ಟಿ. ಪ್ರಮಾಣ ಪತ್ರವನ್ನು ನೀಡಲು ಬರುವುದಿಲ್ಲವೆಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಅದರಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಪಂಚನಾಮೆ ಮಾಡುವ ಸಂದರ್ಭದಲ್ಲಿ ಅರ್ಜಿದಾರರ ಆಚಾರ ವಿಚಾರ, ಕುಲದೇವರು, ಶವಸಂಸ್ಕಾರ, ಮಾನವಶಾಸ್ತ್ರದ ಬಗ್ಗೆ ತಿಳಿದುಕೊಂಡು ನಾಯಕ ವಾಲ್ಮೀಕಿ ಬೇಡರ ಜಾತಿಗೆ ಸಂಬಂಧಪಟ್ಟ ನಾಯಕ ತಳವಾರ ಜಾತಿಯವರು ಎಂದು ದಾಖಲಾತಿಗಳನ್ನು ಸಂಗ್ರಹಿಸಬೇಕು. ಆದರೆ ಪ್ರಸ್ತುತ ರಾಜಕೀಯ ಮತ್ತು ಆಮೀಷಕ್ಕೆ ಒಳಗಾಗಿ ಕಚೇರಿಯಲ್ಲಿ ಕುಳಿತುಕೊಂಡು ಸುಳ್ಳು ಪಂಚನಾಮೆ ವರದಿ ನೀಡಿ ಅಧಿಕಾರ ದುರಪಯೋಗ ಮಾಡಿಕೊಂಡು ಸಂವಿಧಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಘನಘೋರ ಅನ್ಯಾಯವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಗಳ ನಾಯ್ಕಡ, ನಾಯಕ, ತಳವಾರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಕಾನೂನು ಬಾಹಿರವಾಗಿ ಪಡೆಯುತ್ತಿರುವ ಬಗ್ಗೆ ಮಾನ್ಯ ಘಟಕ ನ್ಯಾಯಾಲಯದಲ್ಲಿ ರಿಟ್ ಪೀಟೇಶನ್ ಸಂಖ್ಯೆ:13777/2023 ಪ್ರಕರಣ ದಾಖಲಾಗಿತ್ತು. ಈಗಾಗಲೇ ನ್ಯಾಯಾಲಯದ ಮದ್ಯಂತರ ಆದೇಶ ನೀಡಿ ಜಿಲ್ಲೆಯಲ್ಲಿ ಎಸ್.ಟಿ.ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ವಿರುದ್ಧ 4ಎಫ್ ಅಡಿಯಲ್ಲಿ ಕ್ರಮ ಜರುಗಿಸುವ ನೋಟಿಸ್ ಜಾರಿ ಮಾಡಿದ್ದಾರೆ. ಈಗಾಗಲೇ ಸಂಬಂಧಪಟ್ಟ ಜಿಲ್ಲಧಿಕಾರಿಗಳಿಗೆ ಸುಳ್ಳು ಎಸ್.ಟಿ.ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ಪಡೆದ ವ್ಯಕ್ತಿಗಳಿಗೆ ನೋಟಿಸ್ ನೀಡಲು ನಿರ್ದೇಶಕರು ಆದೇಶಿಸಿರುತ್ತಾರೆ. ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ಜಿಲ್ಲೆಯಲ್ಲಿ ತಹಸೀಲ್ದಾರರು ಎಸ್.ಟಿ.ನಾಯಕ, ತಳವಾರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಅಧಿಕಾರ ದುರಪಯೋಗ ಮಾಡಿಕೊಂಡು ನೀಡುತ್ತಿದ್ದಾರೆ. ಘನ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ. ಸದರಿ ನಾಗರಿಕಹಕ್ಕು ಜಾರಿ ನಿರ್ದೇಶನಾಲಯ ರವರ ವರದಿ ಪ್ರಕಾರ ಜಿಲ್ಲೆಯಲ್ಲಿ ಯಾರು ಕೂಡ ನಾಯಕ ವಾಲ್ಮೀಕಿ, ಬೇಡರ ಜಾತಿಗೆ ಸಂಬಂಧಪಟ್ಟ ನಾಯಕ ತಳವಾರ ಜಾತಿಯವರು ಇರುವುದಿಲ್ಲ. ಬದಲಾಗಿ ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ ತಳವಾರ ಜಾತಿಯವರು ಇರುತ್ತಾರೆಂದು ವರದಿ ನೀಡಿದ್ದಾರೆ.
ಘನ ನ್ಯಾಯಾಲಯ ನಾಲ್ಕು ಬಾರಿ ಮತ್ತು ರಾಜ್ಯ ಸರ್ಕಾರದ ಆದೇಶ ಪ್ರಕಾರ ನಿಜವಾದ ನಾಯಕ ಜನಾಂಗದಲ್ಲಿ ಬರುವ ನಾಯಕ ತಳವಾರ ಪರಿವಾರ ಜಾತಿ ಅವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ತಿಳಿಸಿದ್ದಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ನಾಯಕ ವಾಲ್ಮೀಕಿ ಜನಾಂಗದಲ್ಲಿ ಬರುವ ತಳವಾರ ಪರಿವಾರ ಜಾತಿ ಅವರು ಇರುವುದಿಲ್ಲ. ಜಿಲ್ಲೆಯಲ್ಲಿ ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ ಕೋಲಿ ಜನಾಂಗದಲ್ಲಿ ಬರುವ ತಳವಾರ ಜಾತಿ ಅವರು ಇರುತ್ತಾರೆ. ಆದರೆ ಕೆಲವು ಎಸ್.ಟಿ.ಸಮಾಜದ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಸಂಘಟನೆ ಮಾಡಿಕೊಂಡು ಜಿಲ್ಲೆಯಲ್ಲಿ ಸುಳ್ಳು ಎಸ್.ಟಿ.ನಾಯಕ ನಾಯ್ಕಡ ತಳವಾರ ಪರಿವಾರ ಹೆಸರಿನಲ್ಲಿ ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಬೇಕೆಂದು ಒತ್ತಾಯಿಸುತ್ತಿರುವುದು ಖಂಡನೀಯವಾಗಿದೆ ಎಂದು ಹೇಳಿದರು.
ಸದರಿ ತಾಲೂಕಿನಲ್ಲಿ ಹಿಂದಳಿದ ವರ್ಗದಲ್ಲಿ ಬರುವ ಕಬ್ಬಲಿಗ ಜನಾಂಗದ ತಳವಾರ ಜಾತಿಯವರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡದ ನಾಯ್ಕಡ ನಾಯಕ ತಳವಾರ ಜಾತಿ/ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಬಾರದು ಹಾಗೂ ತಾಲೂಕಿನಲ್ಲಿ ಸುಳ್ಳು ನಾಯ್ಕಡ ನಾಯಕ ತಳವಾರ ಪರಿವಾರ ಹೆಸರಿನಲ್ಲಿ ಹೆಚ್ಚು ಸುಳ್ಳು ಜಾತಿ ಪ್ರಮಾಣ ಪತ್ರಗಳು ವಿತರಣೆ ಆಗಿದ್ದು, ಘನ ಉಚ್ಚನ್ಯಾಯಾಲಯ ಮತ್ತು ಸರ್ಕಾರದ ಆದೇಶಗಳ ಪ್ರಕಾರ ಎಸ್.ಟಿ.ಸುಳ್ಳು ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ರದ್ದುಪಡಿಸಿ ಮತ್ತು ಗೊಂಡಾ ಕುರುಬ ಬೀದರ ಮತ್ತು ಕೊಡಗು ಜಿಲ್ಲೆಯಲ್ಲಿ ಮಾತ್ರ ಆಗಿರುತ್ತದೆ ಎಂದು ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಮತ್ತು ಇತರೆ ಜಿಲ್ಲೆಯಲ್ಲಿ ಗೊಂಡಾ ಕುರುಬ ಆದೇಶ ಆಗಿರುವುದಿಲ್ಲ. ಆದ್ದರಿಂದ ಚಿತ್ತಾಪುರ ತಾಲೂಕಿನಲ್ಲಿ ಗೊಂಡಾ ಕುರುಬ ಎಂದು ಸುಳ್ಳು ಜಾತಿ ಪ್ರಮಾಣ ಪತ್ರಗಳು ತೆಗೆದುಕೊಂಡಿದ್ದು ಕಂಡು ಬಂದಿರುತ್ತದೆ, ಮತ್ತೊಮ್ಮೆ ಪರಿಶೀಲನೆ ಮಾಡಿ ರದ್ದುಮಾಡಬೇಕು ಮತ್ತು ಸಂವಿಧಾನದ ದುರ್ಬಳಕೆ ಆಗುತ್ತಿರುವುದನ್ನು ತಡೆಯಬೇಕು ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಚೂರಿ, ಅಯ್ಯಣ್ಣ ಕರದಳ್ಳಿ ದಿಗ್ಗಾಂವಿ, ರಾಮಪ್ಪ ಚಾಮನೂರ ದಿಗ್ಗಾಂವ, ಚಂದ್ರು ದೊರೆ, ಭಾಗಪ್ಪ ದೊರೆ ಮೊಗಲಾ, ಉಮೇಶ್ ರದ್ದೆವಾಡಗಿ, ಭಗವಾನ್ ಚಾಮನೂರ, ಮರಲಿಂಗಪ್ಪ ಮಳಗ, ಮೌನೇಶ್ ದಿಗ್ಗಾಂವ, ಉಮೇಶ್ ಕೊಳ್ಳಿ, ಮಹಾಂತೇಶ ಲಾಡ್ಲಾಪೂರ, ಮೌನೇಶ್ ಕರದಳ್ಳಿ, ಭೀಮಾನಾಯಕ ದಿಗ್ಗಾಂವ, ಯಲ್ಲಮ್ಮ ಕೋರವಾರ, ಬಂಗಾರಮ್ಮ ದಿಗ್ಗಾಂವ, ಚಂದಮ್ಮ ದಿಗ್ಗಾಂವ ಯು, ಚಂದ್ರಕಲಾ ದಿಗ್ಗಾಂವ ಸೇರಿದಂತೆ ಅನೇಕರು ಇದ್ದರು.

