ರೋಟರಿ ಕ್ಲಬ್ ನಲ್ಲಿ ಭಾರತದ ವಿಕಸಿತ ನಡೆ ವಿಶೇಷ ಉಪನ್ಯಾಸ | ವಿಕಸಿತ ಭಾರತ ಸಂಕಲ್ಪ ನಮ್ಮದಾಗಲಿ: ಸದಾನಂದ ಪೆರ್ಲ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಭಾರತದ ಸ್ವಾತಂತ್ರ್ಯದ 100ನೇ ವರ್ಷ 2047 ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಕಟ್ಟುವ ಸಂಕಲ್ಪ ಈಡೇರಿಕೆಗೆ ಎಲ್ಲರೂ ಒಗ್ಗೂಡೋಣ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಹೇಳಿದರು.
ನಗರದ ರೋಟರಿ ಕ್ಲಬ್ ನಲ್ಲಿ ” ಭಾರತದ ವಿಕಸಿತ ನಡೆ” ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಭಾರತ ಆರ್ಥಿಕ ಸೇರ್ಪಡೆಯ ಬೆಳವಣಿಗೆಯಲ್ಲಿ ವಿಶ್ವದಲ್ಲೇ ಈಗ 5ನೇ ಸ್ಥಾನ ಪಡೆದಿದೆ. ದೇಶ ಆರ್ಥಿಕವಾಗಿ 3ನೇ ಸ್ಥಾನ ಪಡೆಯಲು ಎಲ್ಲ ರಂಗಗಳಲ್ಲಿ ಸಿದ್ಧತೆ ಭರದಿಂದ ನಡೆದಿದೆ. ಕಳೆದ ಒಂದು ದಶಕದಲ್ಲಿ ಪ್ರಗತಿಗೆ ತೀವ್ರ ವೇಗ ಪಡೆದಿದ್ದು ಈಗ ದೇಶದಲ್ಲಿ 23 ಐಐಟಿ, 600 ವೈದ್ಯಕೀಯ ಕಾಲೇಜುಗಳು, 165 ಇಎಸ್ಐ ಆಸ್ಪತ್ರೆ, 26 ಏಮ್ಸ್, 450 ವಿಮಾನ ನಿಲ್ದಾಣಗಳು, 14 ಬಂದರುಗಳು, ಉಡಾನ್ ಯೋಜನೆಯ 95 ವಿಮಾನ ನಿಲ್ದಾಣಗಳು ಹಾಗೂ ವಂದೇ ಭಾರತ್, ಪಿಎಂ ಮಿತ್ರ ಜವಳಿ ಪಾರ್ಕ್, ಗತಿಶಕ್ತಿ, ವಿಬಿಜಿ ರಾಮ್ ಜಿ ಯೋಜನೆ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಬೇಟಿ ಪಡಾವೋ ಬೇಟಿ ಬಚಾವೋ , ಲಕ್ ಪತಿ ದೀದಿ, ಮಹಿಳಾ ಸನ್ಮಾನ್ ಯೋಜನೆ, ಮುದ್ರಾ, ಸಾರ್ಟ್ ಆಫ್ ಇಂಡಿಯಾ ಮುಂತಾದ ಯೋಜನೆಗಳು ಭಾರತವನ್ನು ವಿಕಾಸದತ್ತ ಕೊಂಡೊಯ್ಯಲು ಮಹತ್ವದ ಯೋಜನೆಗಳಾಗಿವೆ ಎಂದು ಹೇಳಿದರು. ರೋಟರಿ, ಲಯನ್ಸ್ ಮುಂತಾದ ಸ್ವಯಂ ಸೇವಾ ಸಂಸ್ಥೆಗಳು ವಿಕಸಿತ ಭಾರತದ ಸಂಕಲ್ಪ ಈಡೇರಿಕೆಗೆ ಕಾಯಾ ವಾಚಾ ಮನಸಾ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿಯ ಅಧ್ಯಕ್ಷ ರಮೇಶ್ ಜಿ ತಿಪ್ಪನೂರು(ಬಂಧು )ಅಧ್ಯಕ್ಷತೆ ವಹಿಸಿದ್ದರು. ರವಿಕುಮಾರ್ ಜಗರ್ ಕಲ್ ಉಪಸ್ಥಿತರಿದ್ದರು. ಬಸವರಾಜ್ ಇಟಗಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯ ಕೋರಲಾಯಿತು. ಕಾರ್ಯದರ್ಶಿ ಡಾ ಬಿ.ಎಸ್ ದೇಸಾಯಿ ಸ್ವಾಗತಿಸಿ ವಂದಿಸಿದರು.

