Oplus_0

ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ | ನೋಡುವ ಸಂಸ್ಕೃತಿಗಿಂತ ಓದುವ ಸಂಸ್ಕೃತಿ ಹೆಚ್ಚಲಿ :ಡಾ ಸದಾನಂದ ಪೆರ್ಲ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಪ್ರಸಕ್ತ ದಿನಗಳಲ್ಲಿ ನೋಡುವ ಸಂಸ್ಕೃತಿಗಿಂತ ಓದುವ ಸಂಸ್ಕೃತಿ ಹೆಚ್ಚಾಗಬೇಕಿದೆ ಎಂದು ಅಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.

ನಗರದ ಹೈಕೋರ್ಟ್ ಸಮೀಪದ ಶಿಕ್ಷಕಿ ಮಮತಾ ಪ್ರವೀಣ್ ಜಾನೆ ಅವರ ಮನೆಯಲ್ಲಿ ನಡೆದ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಮೊಬೈಲ್ ನೋಡುವ ಗೀಳು ಹೆಚ್ಚಾಗಿ ಓದುವ ಸಂಸ್ಕೃತಿ ಕುಗ್ಗುತ್ತಿದೆ. ವ್ಯಕ್ತಿ ಪರಿಪೂರ್ಣತೆ ಸಾಧಿಸಲು ಪುಸ್ತಕಗಳು ಪ್ರೇರಣೆ ನೀಡುತ್ತವೆ. ಶ್ರೇಷ್ಠ ಸಾಧಕರ ಮತ್ತು ಮಹನೀಯರ ಬದುಕಿನಲ್ಲಿ ಪುಸ್ತಕಗಳು ಬಹಳಷ್ಟು ಪ್ರೇರಣೆ ನೀಡಿ ಯಶಸ್ವಿ ಪುರುಷರಾಗಿ ಬೆಳೆದಿದ್ದಾರೆ. ಗಾಂಧೀಜಿ, ಅಂಬೇಡ್ಕರ್, ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಗಣ್ಯರ ಬದುಕಿನಲ್ಲಿ ಪುಸ್ತಕಗಳು ಮಹತ್ತರ ತಿರುವನ್ನು ನೀಡಿದೆ. ಮನೆ ಮನೆಯಲ್ಲಿ ಗ್ರಂಥಾಲಯಗಳನ್ನು ಆರಂಭಿಸಿ ಮಕ್ಕಳಲ್ಲಿ ಮತ್ತು ಮನಸ್ಸುಗಳಲ್ಲಿ ಓದುವ ಸಂಸ್ಕೃತಿ ಬೆಳೆಸುವ ಬಲು ದೊಡ್ಡ ಜವಾಬ್ದಾರಿ ಹಿರಿಯರು ಮತ್ತು ಪಾಲಕರ ಮೇಲಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್ ನಿರಗುಡಿ, ರಾಜ್ಯದಲ್ಲಿ ಪ್ರತಿವರ್ಷ 7 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಮುದ್ರಣ ಆಗುತ್ತವೆ ಆದರೆ ಸರ್ಕಾರ ಖರೀದಿ ಮಾಡುತ್ತಿಲ್ಲ. ಲೇಖಕರು ಸಂಕಷ್ಟದಲ್ಲಿ ಇದ್ದಾರೆ ಸರ್ಕಾರ ಖರೀದಿಸಿ ಲೇಖಕರನ್ನು ಪ್ರೊತ್ಸಾಹಿಸಬೇಕು. ಪುಸ್ತಕ ಓದುಗರ ಸಂಖ್ಯೆ ಮಾತ್ರ ಕುಸಿಯುತ್ತಿದೆ ಸಾರ್ವಜನಿಕ ಗ್ರಂಥಾಲಯಗಳಿದ್ದರೂ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ ಅದಕ್ಕಾಗಿ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಅನುಷ್ಠಾನವನ್ನು ಪ್ರೋತ್ಸಾಹಿಸುತ್ತಿದ್ದು 1 ಲಕ್ಷ ಗುರಿಯನ್ನು ಇರಿಸಿಕೊಂಡಿದ್ದು ಈಗಾಗಲೇ 31 ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು 20 ಸಾವಿರ ಕ್ಕಿಂತಲೂ ಅಧಿಕ ಕಾರ್ಯಕ್ರಮಗಳು ನಡೆದಿದೆ ನಮ್ಮ ಕಲಬುರಗಿ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ನೆರವೇರಿದೆ. ಈ ಭಾಗದಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಹಾಗೂ ನಮ್ಮ ಭಾಗದ ಅನೇಕ ಸಾಹಿತಿ, ಕಲಾವಿದರು, ಪ್ರಕಾಶಕರಿಗೆ ಪ್ರಶಸ್ತಿ, ಆದ್ಯತೆ, ಅವಕಾಶ ದೊರಕಿವೆ ಸರ್ಕಾರದ ವತಿಯಿಂದ ಗಜಲ್ ಲೇಖಕರಾದ ಶಾಂತರಸ ಅವರ ಸಂಪುಟ ಮುದ್ರಣಗೊಳ್ಳುತ್ತಿದ್ದು ನಾಡೋಜ ಡಾ.ಗೀತಾ ನಾಗಭೂಷಣ ಅವರ ಸಂಪುಟವನ್ನು ಶೀಘ್ರದಲ್ಲಿ ಹೊರ ತರಲು ಯೋಜನೆ ಸಿದ್ದಗೊಳ್ಳುತ್ತಿದೆ ಎಂದರು.

ಖ್ಯಾತ ಚಿತ್ರ ಕಲಾವಿದರಾದ ಬಸವರಾಜ ಜಾನೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಅಮೂರ್ತ ಚಿತ್ರಕಲೆಗಳ ಮೂಲಕ ಅಂತರಂಗ ಶುದ್ದಿ ಮತ್ತು ಬಹಿರಂಗ ಶುದ್ದಿಯನ್ನು ಮಾಡುತ್ತದೆ. ಆರ್ಟ್ ಗ್ಯಾಲರಿ ಕೂಡ ಗ್ರಂಥಾಲಯದಂತೆ ಜನರಲ್ಲಿ ಸದಭಿರುಚಿಯ ಕಲಾತ್ಮಕ ಮನಸ್ಸು ಸೃಷ್ಟಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉತ್ತಮ ಗ್ರಂಥಾಲಯ ನಿರ್ಮಾಣ ಮಾಡಿದ ಶಿಕ್ಷಕಿ ಮಮತಾ ಜಾನೆ ಹಾಗೂ ಪ್ರವೀಣ್ ಅವರನ್ನು ಪ್ರಾಧಿಕಾರದ ವತಿಯಿಂದ ಮೈಸೂರು ಪೇಟ ಶಾಲು, ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಶಿಕ್ಷಕಿ ಡಾ ಪರ್ವೀನಾ ಸುಲ್ತಾನಾ ಪ್ರಾರ್ಥನೆ ಗೀತೆ ಹಾಡಿ ನಿರೂಪಣೆ ಮಾಡಿದರು. ಅಂಬಾರಾಯ ಕೋಣೆ, ಬಸವರಾಜ್ ಜಾನೆ, ಕಲಾವಿದೆ ಮಂಜುಳಾ ಜಾನೆ ಮತ್ತಿತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!