ನವದೆಹಲಿಯಲ್ಲಿ ನ. 21 ರಂದು ಹಾರಕೂಡ ಶ್ರೀಗಳ ಜನ್ಮ ದಿನೋತ್ಸವ, ಬೀದರ್ ನಿಂದ ವಿಶೇಷ ರೈಲು: ಉಮೇಶ್ ಜಾಧವ್
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಹಾರಕೂಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಡಾ. ಚನ್ನವೀರ ಶಿವಾಚಾರ್ಯರ 64 ನೇ ಹುಟ್ಟುಹಬ್ಬವನ್ನು ಈ ಬಾರಿ ನವೆಂಬರ್ 21 ರಂದು ಶನಿವಾರ ನವದೆಹಲಿಯಲ್ಲಿ ಆಚರಿಸಲಾಗುವುದು, ಭಕ್ತರ ಪಾಲ್ಗೊಳ್ಳುವಿಕೆಗೆ ಅನುಕೂಲವಾಗುವಂತೆ ಬೀದರ್ ನಿಂದ ದೆಹಲಿಯವರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗುವುದು ಎಂದು ಮಾಜಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಹೇಳಿದರು.
ಹಾರಕೂಡದಲ್ಲಿ ನವರಾತ್ರಿ ಹಬ್ಬದ ನಿಮಿತ್ತ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳ ಜೊತೆ ಎರಡನೇ ಸುತ್ತಿನ ಚರ್ಚೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನವದೆಹಲಿಯ ಜನಪಥ ರಸ್ತೆಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಶ್ರೀಗಳ ಹುಟ್ಟುಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು. ಸುಮಾರು ಸಾವಿರಕ್ಕೂ ಹೆಚ್ಚು ಭಕ್ತರು ಮತ್ತು ಅಭಿಮಾನಿಗಳು ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದು ಹೇಳಿದರು.
ಇದಕ್ಕಾಗಿ ಬೀದರ್ ನಿಂದ ನವಂಬರ್ 19 ರಂದು ವಿಶೇಷ ರೈಲು ನವದೆಹಲಿಗೆ ಹೊರಡಲಿದ್ದು ನವೆಂಬರ್ 20ರಂದು ರಾತ್ರಿ ದೆಹಲಿಗೆ ತಲುಪಲಿದೆ. ದೆಹಲಿಯಿಂದ ನವೆಂಬರ್ 21ರ ರಾತ್ರಿ ಅಥವಾ 22ರ ಬೆಳಿಗ್ಗೆ ವಾಪಸ್ ಬೀದರ್ ಗೆ ಹೊರಡಲಿದ್ದು ರೈಲ್ವೆ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ದೆಹಲಿಯಲ್ಲಿ ಪ್ರತ್ಯೇಕ ದೂರವಾಣಿ ಸಂಖ್ಯೆಯನ್ನು ತೆರೆದು ಮಾಹಿತಿ ಕೇಂದ್ರ ಆರಂಭಿಸಲಾಗುವುದು. 500 ಜನರಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು. ಇನ್ನು ಅಗತ್ಯ ಉಳ್ಳವರಿಗೆ ರಿಯಾಯಿತಿ ದರದಲ್ಲಿ ವಸತಿ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿದ್ಧತೆ ನಡೆಸಲು 25 ಜನ ಸ್ವಯಂಸೇವಕರನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಹಾರಕೂಡ ಪೂಜ್ಯರಾದ ಡಾ. ಚೆನ್ನವೀರ ಶಿವಾಚಾರ್ಯರ 54ನೇ ಹುಟ್ಟುಹಬ್ಬವನ್ನು ಚಿಂಚೋಳಿಯಲ್ಲಿ ಆಚರಿಸುವ ಅವಕಾಶ ಸಿಕ್ಕಿತ್ತು. ಇದೀಗ 10 ವರ್ಷಗಳ ನಂತರ 64ನೇ ಹುಟ್ಟುಹಬ್ಬವನ್ನು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಆಚರಿಸಲು ಅವಕಾಶ ಸಿಕ್ಕಿರುವುದು ದೊಡ್ಡ ಭಾಗ್ಯ. ಪೂಜ್ಯರ ಮೇಲೆ ಭಕ್ತರ ಮತ್ತು ಮಠದ ಅಭಿಮಾನಿಗಳ ಅಪಾರ ಭಕ್ತಿ ಕಂಡು ಆಶ್ಚರ್ಯ ಚಕಿತನಾಗಿದ್ದೇನೆ. ಈ ಅಪೂರ್ವ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಿದ ಪೂಜ್ಯ ಮಠಾಧೀಶರಿಗೆ ಅಭಿನಂದನೆಗಳು ಮತ್ತು ಕಾರ್ಯಕ್ರಮದ ಯಶಸ್ವಿಗೆ ಸಕಲ ಸಿದ್ಧತೆ ಭರದಿಂದ ನಡೆದಿದೆ ಎಂದು ತಿಳಿಸಿದರು.
ಜನ್ಮೋತ್ಸವ ಐತಿಹಾಸಿಕ ಕಾರ್ಯಕ್ರಮವಾಗಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಹಾರಕೂಡ ಮಠಾಧೀಶರಾದ ಡಾ. ಚೆನ್ನವೀರ ಶಿವಾಚಾರ್ಯರು ಉಪಸ್ಥಿತರಿದ್ದರು.

