Oplus_0

ಕರ್ನಾಟಕ ರಾಜ್ಯೋತ್ಸವ | ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸೋಣ: ತಹಸೀಲ್ದಾರ್ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಜೀವ ಮತ್ತು ಉಸಿರು. ನಮ್ಮ ದಿನನಿತ್ಯದ ಬದುಕಿನಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡೋಣ, ಮುಂದಿನ ಪೀಳಿಗೆಗೆ ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸೋಣ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರು ತಮ್ಮ ಭಾಷೆ, ಕಲೆ, ಸಾಹಿತ್ಯ, ಜಾನಪದ ಮತ್ತು ಶ್ರೀಮಂತ ಪರಂಪರೆಯನ್ನು ಸಂಭ್ರಮದಿಂದ ಆಚರಿಸುವ ನಾಡ ಹಬ್ಬ ಇದಾಗಿದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರತಿವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳು 1956ರ ನ. 1 ರಂದು ಒಗ್ಗೂಡಿ ಮೈಸೂರು ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ದಿನದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.

ಮದ್ರಾಸ್, ಮುಂಬೈ, ಹೈದರಾಬಾದ್ ಮತ್ತು ಕೊಡಗು ಪ್ರಾಂತ್ಯಗಳಲ್ಲಿದ್ದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳು ಒಂದಾಗಿ ‘ಮೈಸೂರು ರಾಜ್ಯ’ ನಿರ್ಮಾಣವಾದ ಐತಿಹಾಸಿಕ ದಿನವಿದು. ನಂತರ 1973ರ ನವೆಂಬರ್ 1 ರಂದು ಇದಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು.

ಆಲೂರು ವೆಂಕಟರಾಯರು ಮುಂತಾದ ಮಹನೀಯರು 1905ರಿಂದ ಆರಂಭಿಸಿದ ಕನ್ನಡ ನಾಡಿನ ಏಕೀಕರಣ ಚಳವಳಿ ಹಾಗೂ ಕವಿಗಳು, ಸಾಹಿತಿಗಳು ಮತ್ತು ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ದಿನವಿದು ಎಂದು ಹೇಳಿದರು.

ಕುವೆಂಪು, ಡಿ.ವಿ. ಗುಂಡಪ್ಪ, ಡಾ. ಶಿವರಾಮ ಕಾರಂತ್ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತರು ಕನ್ನಡ ಸಾಹಿತ್ಯವನ್ನು ವಿಶ್ವದ ಮಟ್ಟದಲ್ಲಿ ಬೆಳಗಿಸಿದ್ದಾರೆ ಹಾಗೂ ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಕಸಾಪ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್‌ ಅವರು ಮಾತನಾಡಿದರು.

ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ತಾಪಂ ಇಓ ಮಹ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಸಿಡಿಪಿಒ ಆರತಿ ತುಪ್ಪದ್, ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ, ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರೆ, ಅಬಕಾರಿ ನಿರೀಕ್ಷಕಿ ವನೀತಾ ಸೀತಾಳೆ, ಅಗ್ನಿಶಾಮಕ ಅಧಿಕಾರಿ ಶರಣಯ್ಯ ಗುತ್ತೇದಾರ, ಕೃಷಿ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಪಂಚ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಟಿಎಪಿಸಿಎಂಎಸ್ ಅಧ್ಯಕ್ಷ ದೇವಿಂದ್ರ ಅರಣಕಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಅವರು ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಸಾಯಬಣ್ಣ ಗುಡುಬಾ, ಮಹ್ಮದ್ ಇಬ್ರಾಹಿಂ, ಜಗದೇವ ಕುಂಬಾರ, ವೀರೇಶ ಕರದಾಳ, ಮಹೇಶ್ ಕಾಶಿ ಅವರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡಪರ ಹೋರಾಟಗಾರರಾದ ನರಹರಿ ಕುಲಕರ್ಣಿ, ಲಕ್ಷ್ಮೀಕಾಂತ್ ತಾಂಡೂರಕರ್, ರೇವಣಸಿದ್ದಪ್ಪ ರೋಣದ, ವೀರಸಂಗಪ್ಪ ಸುಲೇಗಾಂವ, ದೇವಿಂದ್ರರೆಡ್ಡಿ ದುಗನೂರ್, ರಾಜಣ್ಣ ಕರದಾಳ ಸೇರಿದಂತೆ ಇತರರು ಇದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಶಂಕರ ಕಣ್ಣಿ ನಿರೂಪಿಸಿದರು, ಶಿವಶರಣಪ್ಪ ಮಂಠಾಳೆ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದಕ್ಕೂ ಮುನ್ನ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!