ವಾಡಿ ಬಿಜೆಪಿ ಕಚೇರಿಯಲ್ಲಿ 71 ನೇ ಕನ್ನಡ ರಾಜ್ಯೋತ್ಸವ ಸಂಭ್ರಮ | ಕರ್ನಾಟಕ ಏಕೀಕರಣ ಹೋರಾಟಗಾರರ ಸ್ಮರಣೀಯ ದಿನ: ವೀರಣ್ಣ ಯಾರಿ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು, ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅತ್ಯಂತ ಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನಿಗೆ ಹಾಗೂ ಕರುನಾಡಿಗೆ ಕನ್ನಡ ರಾಜ್ಯೋತ್ಸವವು ಅತ್ಯಂತ ಹೆಮ್ಮೆಯ ದಿನವಾಗಿದೆ. ಭಾಷೆ ಮತ್ತು ಸಂಸ್ಕೃತಿ ಜನರನ್ನು ಗಡಿಗಳನ್ನು ಮೀರಿ ಒಂದಾಗಿಸುತ್ತದೆ. ಆಲೂರು ವೆಂಕಟರಾಯ್ ಅವರಂತಹ ಮಹನೀಯರ ನೇತೃತ್ವದಲ್ಲಿ ನಡೆದ ಕನ್ನಡ ನಾಡಿನ ಏಕೀಕರಣ ಹೋರಾಟ ಹಾಗೂ ಅವರ ತ್ಯಾಗವನ್ನು ನಾವೆಂದೂ ಮರೆಯಲಾಗದು ಎಂದರು.
ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ರೂಪಿಸಲಾಯಿತು. ನಂತರ 1973ರ ನವೆಂಬರ್ 01ರಂದು ನಮ್ಮ ನಾಡಿಗೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈ ದಿನವು ನಮ್ಮ ಒಗ್ಗಟ್ಟು ಮತ್ತು ಕನ್ನಡ ನುಡಿಯ ಮೇಲಿನ ಪ್ರೀತಿಯ ಸಂಕೇತವಾಗಿದೆ ಎಂದು ವಿವರಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಮಾಜಿ ಉಪಾಧ್ಯಕ್ಷ ಬಸವರಾಜ ಪಂಚಾಳ ಅವರು ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಶ್ರೀಮಂತ ಪರಂಪರೆಯನ್ನು ಸ್ಮರಿಸಿದಾಗಲೆಲ್ಲಾ ಮೈ ಮನ ರೋಮಾಂಚನಗೊಳ್ಳುತ್ತದೆ. ವಿವಿಧ ಭಾಗಗಳಾಗಿದ್ದ ಕನ್ನಡಿಗರನ್ನು ಒಂದಾಗಿಸಿದ ಈ ದಿನದಂದು, ಕನ್ನಡ ರಾಜ್ಯದ ಉದಯಕ್ಕೆ ಕಾರಣರಾದ ಮಹನೀಯರನ್ನು ಸ್ಮರಿಸುವುದು ಮತ್ತು ನಾಡಿನ ಏಳಿಗೆಗಾಗಿ ಶ್ರಮಿಸಿದವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ್ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ತಾಲ್ಲೂಕು ಕಾರ್ಯದರ್ಶಿ ಕಿಶನ ಜಾಧವ, ಮುಖಂಡರಾದ ಹರಿ ಗಲಾಂಡೆ, ಅಶೋಕ ಪವಾರ, ಸೋಮು ಚವ್ಹಾಣ, ಮಲ್ಲಿಕಾರ್ಜುನ ಸಾತಖೇಡ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ದತ್ತಾ ಖೈರೆ, ಗೋವಿಂದ ಚವ್ಹಾಣ, ಪ್ರೇಮ ಚವ್ಹಾಣ, ಅಮನ ಪವಾರ ಸೇರಿದಂತೆ ಹಲವರು ಭಾಗವಹಿಸಿದ್ದರು.
