Oplus_0

ಬಸವ ನಗರ ಹಾಗೂ ಬಾಹರಪೇಟ್ ನಗರ ಸಂಪರ್ಕ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಬಸವ ನಗರ ಹಾಗೂ ಬಾಹರಪೇಟ್ ನಗರಕ್ಕೆ ಸಂಪರ್ಕ ಸೇತುವೆ ಹಾಗೂ ರುದ್ರಭೂಮಿ ಅನುಕೂಲಕ್ಕಾಗಿ ಮಂಜೂರಾದ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳಾದರೂ ಪೂರ್ಣಗೊಳ್ಳದೆ ನೆನೆಗುದಿಯಲ್ಲಿರುವುದರಿಂದ ಸಂಚಾರಕ್ಕೆ ಹಾಗೂ ಅಂತಿಮ ಸಂಸ್ಕಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ಬಿಜೆಪಿ ಮುಖಂಡ ಮಾರುತಿ ಮುಗುಳಕರ್ ತಿಳಿಸಿದ್ದಾರೆ.

ಪುರಸಭೆಯ ನಗರೋತ್ಥಾನ ನಾಲ್ಕನೇ ಹಂತದಲ್ಲಿ ಸೇತುವೆ ಕಾಮಗಾರಿಗೆ 1 ಕೋಟಿ ಅನುದಾನ ಮಂಜೂರಾಗಿದೆ ಈಗಾಗಲೇ ಕಳೆದ ಎರಡು ವರ್ಷಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಆದರೆ ಕಾಮಗಾರಿ ಮಾತ್ರ ಆಮೆ ಗತಿಯಲ್ಲಿ ಸಾಗಿ ಈಗ ಕುಂಠಿತಗೊಂಡಿದೆ, ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಮನ ಹರಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾಹರಪೇಟ್ ಹಾಗೂ ಬಸವ ನಗರದ ಜನತೆಗೆ ಕೇಂದ್ರ ಬಿಂದುವಾದ ರುದ್ರಭೂಮಿಗೆ ಹೋಗಲು ಸೇತುವೆ ಸಮಸ್ಯೆಯಾಗಿತ್ತು, ಇದರಿಂದ ಯಾರಾದರೂ ನಿಧನರಾದಾಗ ಅಂತಿಮ ಸಂಸ್ಕಾರ ಮಾಡಲು ಸೇತುವೆ ರಸ್ತೆ ಸಮಸ್ಯೆಯಿಂದ ತುಂಬಾ ತೊಂದರೆಯಾಗುತ್ತಿತ್ತು, ಇದನ್ನು ಮನಗಂಡು ಪುರಸಭೆ ವತಿಯಿಂದ ಅನುದಾನ ಬಿಡುಗಡೆ ಮಾಡಿದೆ ಆದರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸದೇ ನೆನೆಗುದಿಗೆ ಬಿದ್ದಿರುವುದು ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ಕಾಮಗಾರಿಗೆ ಚುರುಕು ನೀಡುವ ಮೂಲಕ ನಿಗದಿತ ಅವಧಿಯಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಯ್ಯಪ್ಪ ಮೊಗಟೆ, ಮಲ್ಲಿಕಾರ್ಜುನ ಎಂ.ಬೊಮ್ಮನಳ್ಳಿ, ರಾಘವೇಂದ್ರ ಮುಗುಳಕರ್, ಹಣಮಂತ ಬಾಹರಪೇಟ್, ಪಿಡ್ಡಪ್ಪ ಬಾಹರಪೇಟ್ ಅವರು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!