ಚಿತ್ತಾಪುರದಲ್ಲಿ ಎಸ್.ಎಸ್.ಕೆ. ಸಮಾಜದಿಂದ ಸಹಸ್ರಾರ್ಜುನ್ ಮಹಾರಾಜರ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್.ಎಸ್.ಕೆ.) ಸಮಾಜದ ವತಿಯಿಂದ ಕುಲದೈವ ಸಹಸ್ರಾರ್ಜುನ್ ಮಹಾರಾಜರ ಜಯಂತಿ ಮಹೋತ್ಸವವನ್ನು ಸೋಮವಾರ ಅತ್ಯಂತ ಶ್ರದ್ಧಾಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಜಯಂತಿಯ ಅಂಗವಾಗಿ ಬೆಳಿಗ್ಗೆ ವಿಠ್ಠಲ ಮಂದಿರದಲ್ಲಿ ಸಹಸ್ರಾರ್ಜುನ್ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ ಮತ್ತು ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೂವಿನಿಂದ ಅಲಂಕೃತಗೊಂಡ ವಾಹನದಲ್ಲಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಭಜನಾ ಮಂಡಳಿಗಳ ಗಾಯನ, ಮಂಗಳವಾದ್ಯಗಳ ನಿನಾದ ಹಾಗೂ ಜಯಘೋಷಗಳೊಂದಿಗೆ ಸಾಗಿದ ಮೆರವಣಿಗೆಯು ಪಟ್ಟಣದ ಜನರ ಗಮನ ಸೆಳೆಯಿತು. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ಸಮಾಜದ ನೂರಾರು ಬಾಂಧವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಯುವಕ ಸಂಘ, ಮಹಿಳಾ ಮಂಡಳಿಯ ಸದಸ್ಯರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು ಎಂದು ಮಹೇಶಕುಮಾರ ಭಾವಿಕಟ್ಟಿ ತಿಳಿಸಿದರು
“ಸಮಾಜದ ಬಾಂಧವರೆಲ್ಲರೂ ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ಒಗ್ಗಟ್ಟಿನಿಂದ ಸಾಗಬೇಕು. ವಿಶೇಷವಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಇನ್ನಷ್ಟು ಬಲಪಡಿಸಬೇಕು”.-ವಿಕಾಸ ಬಸುದೆ ಸಮಾಜದ ಮುಖಂಡರು.

