ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ | ಆಶಾ ಕಾರ್ಯಕರ್ತೆಯರು ಕೇವಲ ಕಾರ್ಯಕರ್ತೆಯರಲ್ಲ, ಅವರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು: ಜಗದೀಶ್ವರ ಶಾಸ್ತ್ರಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜ್ಯದಾದ್ಯಂತ ಕಳೆದ ಹಲವು ದಿನಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ ಸಂಸ್ಥೆ ಮುಖ್ಯಸ್ಥ ಪ್ರವಚನಕಾರ ಜಗದೀಶ್ವರ ಶಾಸ್ತ್ರಿಗಳು ಸನ್ನತಿ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರೋನಾ ಸಂದರ್ಭದಿಂದ ಹಿಡಿದು ಇಂದಿನವರೆಗೂ, ತಾಯಿ-ಮಗುವಿನ ಆರೋಗ್ಯ ರಕ್ಷಣೆಯಿಂದ ಹಿಡಿದು ಸರ್ಕಾರದ ಎಲ್ಲಾ ಆರೋಗ್ಯ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಅವರಿಗೆ ನೀಡುತ್ತಿರುವ ಮಾಸಿಕ ಗೌರವಧನ ಕೇವಲ ರೂ. 4000 ದಿಂದ 6000 ಮಾತ್ರ. ಇದು ಅವರ ಶ್ರಮಕ್ಕೆ ಮಾಡುವ ದೊಡ್ಡ ಅನ್ಯಾಯ ಎಂದು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ರೂ. 15,000 ನಿಗದಿತ ಮಾಸಿಕ ಗೌರವಧನ ನೀಡಬೇಕು, ಪ್ರೋತ್ಸಾಹಧನದ ಹೆಸರಿನಲ್ಲಿ ಶೋಷಣೆ ನಿಲ್ಲಬೇಕು. ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಸರ್ಕಾರಿ ನೌಕರರಂತೆ ಸಾಮಾಜಿಕ ಭದ್ರತೆ, ಭವಿಷ್ಯ ನಿಧಿ (PF), ESI ಮತ್ತು ನಿವೃತ್ತಿ ಸೌಲಭ್ಯ ಕಲ್ಪಿಸಬೇಕು. ಕೆಲಸದ ಒತ್ತಡಕ್ಕೆ ತಕ್ಕಂತೆ ಮೊಬೈಲ್, ಪ್ರಯಾಣ ಭತ್ಯೆ ಮತ್ತು ಆರೋಗ್ಯ ವಿಮೆ ನೀಡಬೇಕು. ದೌರ್ಜನ್ಯವಿಲ್ಲದೆ, ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಕೇವಲ ಕಾರ್ಯಕರ್ತೆಯರಲ್ಲ, ಅವರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಅವರಿಗೆ ನ್ಯಾಯಯುತ ಗೌರವಧನ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಅವರ ಬೇಡಿಕೆಗಳಿಗೆ ಸ್ಪಂದಿಸಿ, ನ್ಯಾಯಯುತ ಗೌರವಧನ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
