ಚಿತ್ತಾಪುರ ಬಾಲಕಿಯರ ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರ ಮಿಂಚಿನ ಪ್ರತಿಭಟನೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಕಳಪೆ ಆಹಾರ ವ್ಯವಸ್ಥೆಯನ್ನು ಖಂಡಿಸಿ, ವಿದ್ಯಾರ್ಥಿನಿಯರು ಗುರುವಾರ ಬೆಳಿಗ್ಗೆ ಅಂಬೇಡ್ಕರ್ ವೃತ್ತದಲ್ಲಿ ಸುಮಾರು ಒಂದು ತಾಸು ರಸ್ತೆ ತಡೆದು ಕಣ್ಣೀರು ಹಾಕುತ್ತಾ ಮಿಂಚಿನ ಪ್ರತಿಭಟನೆ ನಡೆಸಿದರು.

ವಸತಿ ನಿಲಯದಲ್ಲಿ ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ಆರೋಪಿಸಿದ ವಿದ್ಯಾರ್ಥಿನಿಯರು, ಹೊಟ್ಟೆ ತುಂಬಾ ಊಟ ನೀಡದೆ ಮಿತಿ (ಲಿಮಿಟ್) ಹೇರುತ್ತಾರೆ. ಊಟದಲ್ಲಿ ಕೂದಲು ಮತ್ತು ಹುಳುಗಳು ಬರುತ್ತವೆ. ಹೊಟ್ಟೆಗೆ ಸರಿಯಾಗಿ ಊಟವಿಲ್ಲದಿದ್ದರೆ ವಿದ್ಯೆ ತಲೆಗೆ ಹತ್ತುವುದಾದರೂ ಹೇಗೆ? ತಿಂಗಳುಗಳು ಉರುಳಿದರೂ ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ವಸತಿ ನಿಲಯದಲ್ಲಿ ನೀರಿನ ಸಮಸ್ಯೆ ಹಾಗೂ ಶೌಚಾಲಯದ ಮತ್ತು ಸ್ನಾನದ ಕೊಠಡಿಗಳ ಕೊರತೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಒಂದುವರೆ ವರ್ಷದಿಂದ ಸ್ಪಂದಿಸಿಲ್ಲ, 100 ವಿದ್ಯಾರ್ಥಿನಿಯರಿಗೆ ಕೇವಲ ಎರಡು ಶೌಚಾಲಯ ಹಾಗೂ ಎರಡು ಸ್ನಾನದ ಗೃಹಗಳಿವೆ, ಶೌಚಕ್ಕೆ ಹಾಗೂ ಸ್ನಾನಕ್ಕೆ ಸರತಿ ಸಾಲಿನಲ್ಲಿ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೋವಿನಿಂದ ಹೇಳಿದರು.

ಅಲ್ಲದೆ, ವಸತಿ ನಿಲಯದಲ್ಲಿ ಮಲಗಲು ಬೆಡ್ ಹಾಗೂ ಕಾಟುಗಳ ವ್ಯವಸ್ಥೆಯಿಲ್ಲ. ಕುಡಿಯಲು ಹಾಗೂ ಬಳಸಲು ಒಂದೇ ಟ್ಯಾಂಕ್ ನೀರಿದ್ದು, ಅದೂ ಮಣ್ಣು ಮಿಶ್ರಿತವಾಗಿದೆ. ಈ ನೀರಿನಲ್ಲಿ ಮೂರು ದಿನ ಕಳೆಯುವುದು ಅಸಾಧ್ಯವಾಗಿದೆ. ತಣ್ಣೀರೇ ಸರಿಯಾಗಿ ಸಿಗದಿರುವಾಗ ಬಿಸಿ ನೀರಿನ ಮಾತೆಲ್ಲಿ? ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಭೇಟಿ ನೀಡಿ ವಿದ್ಯಾರ್ಥಿನಿಯರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಎಸ್.ಸಿ. ಪಾಟೀಲ್ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣಾಧಿಕಾರಿ ರಾಜಕುಮಾರ ಡೋಣಿ ಮಾತನಾಡಿ, ನಾನು ಈ ಹುದ್ದೆಗೆ ಹೊಸದಾಗಿ ವರ್ಗಾವಣೆಯಾಗಿ ಬಂದಿದ್ದೇನೆ. ವಸತಿ ನಿಲಯದಲ್ಲಿ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಗಂಭೀರವಾಗಿ ಪರಿಗಣಿಸಿ, ಒಂದು ವಾರದೊಳಗೆ ಸಂಪೂರ್ಣವಾಗಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ವಸತಿ ನಿಲಯದ ವಾರ್ಡನ್ ಜಯಶ್ರೀ ಪ್ರತಿಕ್ರಿಯಿಸಿ, “ವಸತಿ ನಿಲಯದಲ್ಲಿ ಪ್ರತಿದಿನ 69 ವಿದ್ಯಾರ್ಥಿಗಳು ಹಾಜರಿರುತ್ತಾರೆ. ಸದ್ಯ ಬೋರ್‌ವೆಲ್ ಕೆಟ್ಟಿದ್ದು, ಈ ಬಗ್ಗೆ ತಾಲೂಕು ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಉಳಿದ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಕಲ್ಪಿಸಲಾಗುವುದು” ಎಂದು ತಿಳಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!