ರಾವೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ | ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವಿದ್ದಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ: ಸಿದ್ದಲಿಂಗ ಶ್ರೀಗಳು
ನಾಗಾವಿ ಎಕ್ಸಪ್ರೆಸ್
ಶಹಾಬಾದ: ವಿದ್ಯಾರ್ಥಿಗಳು ಸಾಧಿಸುವ ಛಲ ಹೊಂದಿರಬೇಕು ಅಂದಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ರಾವೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಕಲಬುರಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿತ್ತಾಪುರ ವತಿಯಿಂದ ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ನಡೆದ ರಾವೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಧಿಸುವ ಛಲ ಹೊಂದಿರುವ ಪ್ರತಿಯೊಬ್ಬರೂ ಜೀವನದಲ್ಲಿ ಮೂರನ್ನು ಕಸದ ಬುಟ್ಟಿಗೆ ಹಾಕಬೇಕು ಅವೆಂದರೆ ನನ್ನಿಂದ ಸಾಧ್ಯವಿಲ್ಲ ಎನ್ನುವ ಮಾತು, ಯಾರು ಏನೆಂದುಕೊಳ್ಳುತ್ತಾರೆ ಎಂಬ ಮನೋಭಾವ, ನನಗೆ ಮಾಡಲು ಮನಸ್ಸಿಲ್ಲ ಎಂಬ ಮನಸ್ಥಿತಿ ಈ ಮೂರನ್ನು ತ್ಯಜಿಸಿದರೆ ಸಾಧಕರಾಗಲು ಸಾಧ್ಯ. ಪ್ರತಿ ಮಗುವಿನಲ್ಲೂ ಪ್ರತಿಭೆ ಎನ್ನುವುದು ಸುಪ್ತವಾಗಿ ಅಡಗಿರುತ್ತದೆ ಶಿಕ್ಷಕರಾದವರು ಆ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಕೊಟ್ಟಾಗ ಮಾತ್ರ ಪ್ರತಿಭೆ ಹೋರ ಜಗತ್ತಿಗೆ ಅನಾವರಣಗೊಳ್ಳುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪದವಿಧರ ಶಿಕ್ಷಕರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ್ ಮಾತನಾಡಿ, ಸ್ಪರ್ಧೆಗಳಲ್ಲಿ ನಿರ್ಣಾಯಕರು ಬಹಳ ಪ್ರಾಮಾಣಿಕತೆಯಿಂದ ಯಾವುದೇ ಪಕ್ಷಪಾತ ಮಾಡದೇ ನೈಜ ಪ್ರತಿಭೆಗಳನ್ನು ಆಯ್ಕೆ ಮಾಡಿ ಮುಂದಿನ ಹಂತಗಳಿಗೆ ಕಲಿಸಬೇಕು. ಅಂದಾಗ ಮಾತ್ರ ನಿಜವಾಗಿ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ರಾವೂರ ಕ್ಲಸ್ಟರ್ ನ ಸಿಆರ್ ಪಿ ಅಂಬದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭಾಕಾರಂಜಿಯ ರೂಪರೇಷಗಳನ್ನು ತಿಳಿಸಿದರು.
ವೇದಿಕೆಯ ಮೇಲೆ ಟಿಪಿಓ ಶಿವಶರಣಪ್ಪ ಮಂಠಾಳೆ, ಸಂಸ್ಥೆಯ ಸಂಚಾಲಕ ಡಾ. ಗುಂಡಣ್ಣ ಬಾಳಿ, ಯುವ ಮುಖಂಡ ಸಾಹೇಬಗೌಡ ತುಮಕೂರ, ಏನ್ ಜಿಓ ಸದಸ್ಯ ಮಾರುತಿ ಪೂಜಾರಿ, ಛತೃ ರಾಠೋಡ, ಗಂಗಪ್ಪ ಕಟ್ಟಿಮನಿ, ಮನೋಹರ ಜೋಶಿ ಇದ್ದರು. ಅಬ್ದುಲ್ ಸಲಿಂ ಪ್ಯಾರೆ ಸ್ವಾಗತಿಸಿದರು, ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ರಾವೂರ ಕ್ಲಸ್ಟರ್ ನ 10 ಪ್ರಾಥಮಿಕ ಹಾಗೂ 6 ಪ್ರೌಢ ಶಾಲೆಗಳ 200 ಕ್ಕೂ ಹೆಚ್ಚು ಮಕ್ಕಳು ವಿವಿಧ ವಿಭಾಗಗಲ್ಲಿ ಸ್ಪರ್ದಿಸಿದರು.

