ವಿದ್ಯಾರ್ಥಿ ಹಾಸ್ಟೆಲ್ ಅವ್ಯವಸ್ಥೆ | ಸಚಿವ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದ ಕಡೆ ಗಮನ ಹರಿಸಲಿ: ಸಜ್ಜನಶೆಟ್ಟಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದಲ್ಲಿ ವಿದ್ಯಾರ್ಥಿ ವಸತಿ ನಿಲಯಗಳು ಅವ್ಯವಸ್ಥೆಯಿಂದ ಕೂಡಿವೆ ಅನೇಕ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಹೀಗಾಗಿ ಕೂಡಲೇ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗಮನ ಹರಿಸಲಿ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಕೆಲ ತಿಂಗಳಿಂದ ಮಳಖೇಡ ರಸ್ತೆಯ ಅಂಬೇಡ್ಕರ್ ವಸತಿ ನಿಲಯ, ವೆಂಕಟೇಶ್ವರ ನಗರ ವಸತಿ ನಿಲಯ, ದಂಡೋತಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿನ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈಗ ಚಿತ್ತಾಪುರ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬೇಸತ್ತು ವಿದ್ಯಾರ್ಥಿನಿಯರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಹೀಗಾಗಿ ತಾಲೂಕಿನ ಹಾಸ್ಟೆಲ್ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಕುಡಿಯುವುದಕ್ಕೆ ನೀರಿಲ್ಲ, ಸ್ನಾನಕ್ಕೆ ನೀರಿಲ್ಲ, ಗುಣಮಟ್ಟದ ಆಹಾರ ನೀಡದೇ ಕಳಪೆ ಆಹಾರ ನೀಡುತ್ತಿದ್ದಾರೆ ಹಾಗೂ 100 ವಿದ್ಯಾರ್ಥಿನಿಯರಿಗೆ ಕೇವಲ ಎರಡು ಶೌಚಾಲಯ ಮತ್ತು ಎರಡು ಸ್ನಾನದ ಕೊಣೆ ಇವೆ ಹೀಗಾಗಿ ಇಲ್ಲಿನ ಬಡ ದಲಿತ ವಿದ್ಯಾರ್ಥಿನಿಯರು ಪಡಬಾರದ ಕಷ್ಟ ಪಡುತ್ತಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಅಂತಾರಾಷ್ಟ್ರೀಯ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದ ಕಡೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಏಳೆಂಟು ತಿಂಗಳಿಂದ ಚಿತ್ತಾಪುರ ಕ್ಷೇತ್ರಕ್ಕೆ ಬಂದಿಲ್ಲ, ಜಿಲ್ಲೆಯಲ್ಲಿ ದಿಶಾ ತಾಲೂಕಿನಲ್ಲಿ ಕೆಡಿಪಿ ಸಭೆ ನಡೆಸಿಲ್ಲ, ಅಧಿಕಾರಿಗಳ ಮೇಲೆ ಹಿಡಿತ ಇಲ್ಲ ಹೀಗಾಗಿ ಇಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ ಅವಂಟಿ, ನಾಗರಾಜ ಹೂಗಾರ, ಸುರೇಶ್ ಬೆನಕನಳ್ಳಿ, ರಮೇಶ್ ಬೊಮ್ಮನಳ್ಳಿ, ದೀಪಕ್ ಹೊಸ್ಸುರಕರ್, ಶಿವರಾಮ್ ಚವ್ಹಾಣ, ರಮೇಶ್ ಕಾಳನೂರ ಇದ್ದರು.

