ತೊಗರಿ ಬೆಳೆಯ ನಿರ್ವಹಣಾ ಕ್ರಮಗಳು ಅನುಸರಿಸಲು ಕೃಷಿ ಸಹಾಯಕ ನಿರ್ದೇಶಕ ಮಾನಕರ್ ಕೋರಿಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ ಸುಮಾರು 6 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಈ ಬಾರಿ ಜೂನ್ ತಿಂಗಳಿನಲ್ಲಿ ಮುಂಗಾರು ಪ್ರಾರಂಭವಾದ ಕಾರಣ ಬಹಳಷ್ಟು ರೈತರು ಜೂನ್ ಮೊದಲನೆ ವಾರದಲ್ಲಿ ತೊಗರಿ ಬಿತ್ತನೆ ಕೈಗೊಂಡಿದ್ದಾರೆ. ನಂತರದ ದಿನಗಳಲ್ಲಿ ಸತತವಾದ ಮಳೆಯಿಂದಾಗಿ ತೊಗರಿಯಲ್ಲಿ ಹೆಚ್ಚಿನ ಪ್ರಮಾಣದ ಗಿಡದ ಬೆಳವಣಿಗೆಯಾಗಿದೆ. ಮಣ್ಣಿನಲ್ಲಿ ಹೆಚ್ಚಿನ ತೇವಾಂಶ ಇರುವ ಕಾರಣ ಹೂ ಬಿಡುಲು ಸುಮಾರು 15 ರಿಂದ 20 ದಿನಗಳ ಹೆಚ್ಚಿಗೆ ಅವಧಿ ತೆಗೆದುಕೊಂಡಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್ ಮಾಹಿತಿ ನೀಡಿದ್ದಾರೆ.
ಈ ಕಾರಣದಿಂದಾಗಿ ಜಿ.ಆರ್.ಜಿ-811 ಮತ್ತು ಜಿ.ಆರ್.ಜಿ.-152 ತಳಿಗಳು ಹೂ ಬಿಡಲು ತಡವಾಗಿದೆ ಹಾಗೂ ಈ ಸಧ್ಯ ಸುಮಾರು 15 ರಿಂದ 40 ಶೇ. ಹೂವಾಡುವ ಹಂತದಲ್ಲಿದೆ. ಮುಂದಿನ 10-12 ದಿನಗಳ ಅವಧಿಯಲ್ಲಿ ಈ ಎರಡೂ ತಳಿಗಳಲ್ಲಿ ಸಂಪೂರ್ಣ ಹೂ ಬಿಡುವ ನಿರೀಕ್ಷೆಯಿದ್ದು ರೈತರು ಆತಂಕ ಪಡುವುದು ಬೇಡ ಎಂದು ತಿಳಿಸಿದ್ದಾರೆ.
ರೈತರು ಅನುಸರಿಸಬೇಕಾದ ನಿರ್ವಹಣಾ ಕ್ರಮಗಳು:
1. ಈಗಾಗಲೇ ಹೂ ಬಿಟ್ಟಿರುವ ಹೊಲಗಳಲ್ಲಿ ಮೊದಲನೆ ಸಿಂಪರಣೆಯಾಗಿ ಪ್ರೋಫೆನೋಫಾಸ್ 50 ಇ.ಸಿ.- 2 ಎಮ್.ಎಲ್/ಲೀ + ಕಾರ್ಬನ್ ಡೈಜಿಮ್-1ಗ್ರಾಂ/ಲೀ + ಪಲ್ಸ್ಮ್ಯಾಜಿಕ್ 5 ಗ್ರಾಂ/ಲೀ ಇವುಗಳನ್ನು ಬೆರೆಸಿ ಸಿಂಪರಣೆ ಕೈಗೊಳ್ಳುವುದು ಸೂಕ್ತ. ಒಂದು ಎಕರೆಗೆ 400 ಲೀಟರ್ ನೀರು ಬಳಸಿ ಸಿಂಪರಣೆ ದ್ರಾವಣ ತಯಾರಿಸಿ ಬಳಸಬೇಕು ಅಥವಾ ಪ್ರೋಫೆನೋಫಾಸ್ 50 ಇ.ಸಿ.-2ಎಮ್.ಎಲ್/ಲೀ + ಕಾರ್ಬನ್ ಡೈಜಿಮ್-1ಗ್ರಾಂ/ಲೀ+ ಮೈಕ್ರೋನೂಟ್ರಿಯಂಟ್ 5 ಗ್ರಾಂ/ಲೀ ಜೊತೆ ಎನ್.ಎ.ಎ.-(ಪ್ಲಾನೋಫಿಕ್ಸ್) 0.5 ಎಮ್.ಎಲ್ /ಲೀ ಅಥವಾ ಜಿ.ಎ-3 (100 ಪಿ.ಪಿ.ಎಂ) 0.5 ಎಮ್.ಎಲ್ /ಲೀ ಅನ್ನು 400 ಲೀಟರ್ ನೀರಿನ ಸಿಂಪರಣಾ ದ್ರಾವಣದಲ್ಲಿ ಒಂದು ಎಕರೆಗೆ ಬಳಸಬೇಕು.
2. ತೊಗರಿ ಸಾಲು ಮಧ್ಯೆ ಎಡೆಕುಂಟೆ ಹೊಡೆಯಲು ಸಾಧ್ಯವಿರುವ ಕಡೆ ಕುಂಟೆಯಿಂದ ಅಂತರ ಬೇಸಾಯ ಮಾಡಬೇಕು ಹಾಗೂ ಬಿರಕು ಬಿಡದಂತೆ ನೋಡಿಕೊಳ್ಳಬೇಕು.
3. ಎರಡನೇ ಸಿಂಪರಣೆಯನ್ನು ಕೀಟದ ತೀವ್ರತೆಯನ್ನು ಆಧರಿಸಿ ಮೊದಲನೆ ಸಿಂಪರಣೆಯ 10-15 ದಿನಗಳ ನಂತರ ಕೀಡೆಗಳು ಕಂಡುಬಂದಲ್ಲಿ ಮಾತ್ರ ಸಿಂಪರಣೆ ಕೈಗೊಳ್ಳಬೇಕು.
4. ಬೆಳೆಯ ಕಾಂಡದ ಮೇಲೆ ಕಪ್ಪು ಮತ್ತು ಬಿಳಿ ಮಚ್ಚೆಗಳು ಕಂಡು ಬಂದಲ್ಲಿ ಪ್ರತಿ ಲೀಟರ ನೀರಿಗೆ 3 ಗ್ರಾಂ ಕಾರ್ಬೆಂಡೆಜಿಮ್ + ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರನಾಶಕವನ್ನು ಸಿಂಪರಣೆ ಮಾಡಬೇಕು.
5. ತೊಗರಿಯಲ್ಲಿ ಅಲ್ಲಲ್ಲಿ ನೆಟೆ ಕಂಡುಬಂದಲ್ಲಿ ಅಂತಹ ಹೊಲಗಳಲ್ಲಿ ಬೆಳೆಗೆ ಟ್ರೈಕೊಡರ್ಮ 5ಗ್ರಾಂ/ಲೀ ನೀರಿಗೆ ಬೆರಸಿ ಗಿಡದ ಬುಡಕ್ಕೆ ಹಾಕಬೇಕು.
6. ಹೂವು ಗೊಂಚಲ ಮತ್ತು ಕಾಯಿಯ ದೇಟುಗಳ ಮೇಲೆ ಎಲೆ ಚುಕ್ಕೆ ರೋಗ ಕಂಡುಬಂದಲ್ಲಿ ಕಾರ್ಬೇಂಡೆಜಿಮ್ 50 ಡಬ್ಯೂಪಿ. ಯನ್ನು ಗ್ರಾಂ/ ಲೀಟರ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. ಈ ಕ್ರಮಗಳನ್ನು ರೈತರು ಅನುಸರಿಸಬೇಕು ಎಂದು ಕೋರಿದ್ದಾರೆ.

