ಹೊಸ ಸಮೀಕ್ಷೆ ಆಧರಿಸಿ ಒಳ ಮೀಸಲಾತಿ ಕಲ್ಪಿಸಲು ದಸಂಸ ಮುಖಂಡರ ನಿಯೋಗ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಭೇಟಿ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿಯವರ ನೇತೃತ್ವದ ಪದಾದಿಕಾರಿಗಳ ನಿಯೋಗವು ಒಳ ಮೀಸಲಾತಿಗೆ ಸಂಬಂಧದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಏಕಸದಸ್ಯ ಆಯೋಗದ ಅಧ್ಯಕ್ಷರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದರು.
2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಗಳ ಜನಸಂಖ್ಯೆ 1.04 ಕೋಟಿಗೂ ಅಧಿಕವಿದ್ದು ಹಾಗೆ 2011ರ ಜನಗಣತಿಯ ವರದಿಯು 13 ವರ್ಷಗಳಷ್ಟು ಹಳೆಯದಾಗಿದೆ, ರಾಜ್ಯ ಸರಕಾರದ 2023ರ ಅಧಿಕೃತ ಸರ್ವೇ ಅಂದಾಜಿನ ಪ್ರಕಾರ ಜನಸಂಖ್ಯೆಯು ಸುಮಾರು 1.41 ಕೋಟಿಗೆ ಏರಿಕೆಯಾಗಿದೆ, ಹೀಗಾಗಿ ವೈಜ್ಞಾನಿಕವಾಗಿ ಹೊಸಗಣತಿಯನ್ನು ಆಧಾರ ಮಾಡಿ ಸರ್ವರಿಗೂ ಸಮಪಾಲನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
2011ರ ಜನಗಣತಿಯು 13 ವರ್ಷದಷ್ಟು ಹಳೆಯಾಡದಾಗಿದ್ದು, ಆ ಗಣತಿಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂದು ಜಾತಿಗಳ ಗುಂಪುಗಳ ಗಣತಿ ಮಾಡಲಾಗಿದೆ, ಇವುಗಳನ್ನು ಪರಿಶಿಷ್ಟ ಪಟ್ಟಿಯಿಂದ ಕೈಬಿಟ್ಟು, ಹೊಸ ದತ್ತಾಂಶವನ್ನು ಆಧರವಾಗಿ ಇಟ್ಟುಕೊಂಡು ಪರಿಶಿಷ್ಟ ಜಾತಿ(ಎಸ್‌ಸಿ) ಒಳಮೀಸಲಾತಿ ಕಲ್ಪಿಸಬೇಕು ಎಂದರು.
2025ರಲ್ಲಿ ಕೇಂದ್ರ ಸರಕಾರ ನಡೆಸಲಿರುವ ಜನಗಣತಿಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಗಳನ್ನು ಕೈಬಿಟ್ಟು ಕಲೆ ಹಾಕುವ ದತ್ತಾಂಶದ ಪ್ರಕಾರ ಒಳ ಮೀಸಲಾತಿ ಜಾರಿಗೊಳಿಸುವುದು ಸೂಕ್ತ ಆಯಾ ಉಪಜಾತಿಗಳ ಹೆಸರುಗಳನ್ನು ಬಳಸಿ ಜಾತಿ ಗಣತಿ ನಡೆಸುವುದು ಅನಿವಾರ್ಯವಾಗಿದೆ. ಆದುದರಿಂದ ಹೊಸ ಜಾತಿ ಗಣತಿಯನ್ನು ಮಾಡುವ ಮೂಲಕ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯ ಎಂದು ಹೇಳಿದರು.
ಆದುದರಿಂದ ಸರಕಾರದ ಬಳಿಯಲ್ಲಿ ಯಾವುದೇ ರೀತಿಯ ನಿಖರವಾದ ಉಪಜಾತಿಗಳ ದತ್ತಾಂಶವಿಲ್ಲದ ಕಾರಣ ಹಾಗೂ ಸುಪ್ರಿಂ ಕೋರ್ಟ್ ಹೇಳಿರುವ ಮಾರ್ಗಸೂಚಿಗಳ ಅನ್ವಯ ಮುಂದಿನ ಗಣತಿ ನಡೆಯಬೇಕು ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಮನವಿ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ದಸಂಸ ಪದಾಧಿಕಾರಿಗಳಾದ ಗಂಗನಂಜಯ್ಯ, ಡಾ. ಶಿವಲಿಂಗಯ್ಯ, ಕೃಷ್ಣಮೂರ್ತಿ, ಶ್ರವಣ, ಶ್ರೀನಿವಾಸ ಮತ್ತು ಜಯಂತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಹಾಬಾದ ಸುದ್ದಿ: ನಾಗರಾಜ್ ದಂಡಾವತಿ