ತಾಲೂಕು ಆಡಳಿತ ವತಿಯಿಂದ ಬುದ್ಧ ಜಯಂತಿ ಆಚರಣೆ | ಬುದ್ಧರ ತತ್ವ ಪಾಲನೆಯಿಂದ ಮಾತ್ರ ವಿಶ್ವಶಾಂತಿ ಸಾಧ್ಯ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಭಗವಾನ್ ಬುದ್ಧರು ಬೋಧಿಸಿದ ಆಷ್ಟಾಂಗ ಮಾರ್ಗಗಳನ್ನು ಅನುಸರಿಸಿದರೆ ಮಾತ್ರ ನೆಮ್ಮದಿಯ ಜೀವನ ಹಾಗೂ ವಿಶ್ವಶಾಂತಿ ಸಾಧ್ಯ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಪಟ್ಟಣದ ಬಸ್ ನಿಲ್ದಾಣದ ಎದುರಿಗಿರುವ ಬುದ್ಧ ವಿಹಾರದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಭಗವಾನ್ ಬುದ್ಧ ಜಯಂತ್ಯುತ್ಸವ ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬುದ್ಧರ 2570ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬುದ್ಧರು ಜೀವನದ ಸತ್ಯವನ್ನು ಸರಳವಾಗಿ ತಿಳಿಸಿದ್ದಾರೆ. ಆಸೆಯೇ ದುಃಖಕ್ಕೆ ಮೂಲವಾಗಿದ್ದು, ಅದನ್ನು ತ್ಯಜಿಸಲು ಅಷ್ಟಾಂಗ ಮಾರ್ಗಗಳು ದಾರಿದೀಪವಾಗಿವೆ. ಮಾನವನ ನೋಟ, ದಾರಿ ಮತ್ತು ಜೀವನಶೈಲಿ ಉತ್ತಮವಾಗಿದ್ದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಚಿತ್ತಾಪುರದವರೆಗೂ ಸಾಮ್ರಾಟ್ ಅಶೋಕನ ಸಾಮ್ರಾಜ್ಯ ವಿಸ್ತರಿಸಿತ್ತು ಎಂಬುದು ಈ ಭಾಗದ ಹೆಮ್ಮೆಯ ವಿಷಯ. ವೈಭೋಗಕ್ಕಿಂತ ಸಾಮಾನ್ಯ ಜೀವನದ ಮಹತ್ವವನ್ನು ಬುದ್ಧರು ಸಾರಿದ್ದಾರೆ ಎಂದು ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿ ಧಮ್ಮ ಸಂದೇಶ ನೀಡಿದ ಬೀದರ್‌ನ ಪೂಜ್ಯಶ್ರೀ ಭಂತೆ ಶಾಂತಿ ಸಮನ, ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ‘ಬುದ್ಧ ಮತ್ತು ಅವರ ಧಮ್ಮ’ ಪುಸ್ತಕದಲ್ಲಿ ಬುದ್ಧರು ಯಾಕೆ ಮನೆ ಬಿಟ್ಟರು ಎಂಬ ನೈಜ ಸತ್ಯಾಂಶವಿದೆ. ಜ್ಞಾನೋದಯದ ನಂತರ ಸಾರಾನಾಥದಲ್ಲಿ ಅವರು ನೀಡಿದ ಬೋಧನೆಗಳು ಅಸಂಖ್ಯಾತ ಶಿಷ್ಯರನ್ನು ಸೃಷ್ಟಿಸಿತು ಎಂದರು.
ವಿಶೇಷ ಉಪನ್ಯಾಸಕರಾಗಿ ದಲಿತ ಮುಖಂಡ ರಮೇಶ ಕವಡೆ ಮಾತನಾಡಿ, 6ನೇ ಶತಮಾನದಲ್ಲೇ ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ ಬುದ್ಧ, ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಬುದ್ಧ ಪೂರ್ಣಿಮೆಯು ಅವರ ಜನನ, ಜ್ಞಾನೋದಯ ಹಾಗೂ ಮಹಾಪರಿನಿರ್ವಾಣ ಮೂರನ್ನೂ ಒಳಗೊಂಡ ಅಪರೂಪದ ದಿನ. ಬುದ್ಧ ಹುಟ್ಟಿದ ನಾಡಿನಲ್ಲಿ ನಾವಿದ್ದು ಅವರ ತತ್ವ ಪಾಲಿಸದಿರುವುದು ವಿಪರ್ಯಾಸ ಎಂದು ಮಾರ್ಮಿಕವಾಗಿ ನುಡಿದರು.
ಜಯಂತಿ ಸಮಿತಿ ಅಧ್ಯಕ್ಷ ಜಗನ್ನಾಥ ಮುಡಬೂಳಕರ್, ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿಕರ್, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ದೇವಿಂದ್ರ ಎಮ್. ಅರಣಕಲ್, ತಾ.ಪಂ ಇಓ ಮೊಹಮ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ. ದಂಡೋತಿ, ಕಾರ್ಮಿಕ ಇಲಾಖೆ ಅಧಿಕಾರಿ ವಿಕ್ರಮ ಬಡಿಗೇರ, ತಾಲೂಕು ಆರೋಗ್ಯ ಅಧಿಕಾರಿ ಡಾ.ವೀರನಾಥ ವೇದಿಕೆಯಲ್ಲಿದ್ದರು.
ಪ್ರಮುಖರಾದ ಮಲ್ಲಿಕಾರ್ಜುನ ಬೆಣ್ಣೂರಕರ್ , ಶ್ರೀಕಾಂತ ಸಿಂಧೆ, ಲೋಹಿತ್ ಮುದ್ದಡಗಿ, ಬಸವರಾಜ ಮುಡಬೂಳಕರ್ ,ದೇವಿಂದ್ರ ಕುಮಸಿ, ಮಹಾಂತೇಶ ಬೊಮ್ಮನಳ್ಳಿ, ಉದಯಕುಮಾರ ಸಾಗರ್, ಬಸವರಾಜ ಕೆಇಬಿ, ಗುರುಲಿಂಗ ಸ್ವಾಮಿ ಪುರದಯನಮಠ, ಮಾಜಿದ್ ತೇಲಿ, ಆದಪ್ಪ ಸಜ್ಜನ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಬುದ್ಧ ಅನುಯಾಯಿಗಳು ಪಾಲ್ಗೊಂಡಿದ್ದರು. ಶಿವಶರಣಪ್ಪ ಮಂಠಾಳೆ ಕಾರ್ಯಕ್ರಮ ನಿರೂಪಿಸಿದರು, ಅಕ್ಷರ ದಾಸೋಹ ಅಧಿಕಾರಿ ಶಂಕರ ಡಾಂಗೆ ವಂದಿಸಿದರು.

