ದಂಡಗುಂಡ ಬಸವಣ್ಣ ದೇಗುಲದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಸಂಸ್ಥೆಯಿಂದ 2 ಲಕ್ಷ ದೇಣಿಗೆ, ವೀರೇಂದ್ರ ಹೆಗ್ಗಡೆಯವರ ಅವರ ಕೊಡುಗೆ ಅನನ್ಯ: ಭೀಮಣ್ಣ ಸಾಲಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸದಾ ಪರೋಪಕಾರಿ, ಸಾಮಾಜಿಕ ಸೇವೆಗಾಗಿ ತಮ್ನನ್ನು ತಾವು ತೊಡಗಿಸಿಕೊಂಡು ಸಮಷ್ಟಿಯ ಪ್ರತಿ ವಿಭಾಗದ ಏಳಿಗೆಗೆ ಶ್ರಮಿಸುತ್ತಿರುವ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ದಂಡಗುಂಡ ಬಸವಣ್ಣ ದೇಗುಲದ ಜೀರ್ಣೋದ್ಧಾರಕ್ಕೆ ಪ್ರಸಾದ ರೂಪದಲ್ಲಿ 2 ಲಕ್ಷ ರೂಪಾಯಿಗಳ ದೇಣಿಗೆ ನೀಡುತ್ತಿರುವುದು ಪ್ರಶಂಸನೀಯ ಸಂಗತಿಯಾಗಿದೆ, ಅವರ ಕೊಡುಗೆ ಅನನ್ಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ತಾಲೂಕಿನ ಐತಿಹಾಸಿಕ ಪ್ರಸಿದ್ಧ ದಂಡಗುಂಡ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಗುರುರಾಜ್ ಅವರಿಂದ ಡಿಡಿ ಸ್ವೀಕರಿಸಿ ಮಾತನಾಡಿದ ಅವರು, ಜೀರ್ಣೋದ್ಧಾರ ಸಮಿತಿಯ ಮುಖ್ಯಸ್ಥರಾಗಿ ಡಿ.ಡಿ ಸ್ವೀಕರಿಸುತ್ತಿರುವುದು ಧನ್ಯತೆಯ ಭಾವ ಮೂಡುತ್ತಿದೆ. ಹೆಚ್ಚಿನ ಸಂಪತ್ತು ಹಲವರಲ್ಲಿ ಕ್ರೂಡೀಕರಣವಾಗಿದೆ ಆದರೆ ಕೊಡುವ ಮನಸ್ಸು ಪೂಜ್ಯರಲ್ಲಿ ಕಾಣಬಹುದಾಗಿದೆ, ಪೂಜ್ಯರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು, ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು ಸದುದ್ದೇಶದಿಂದ ಬಳಸಿಕೊಂಡಲ್ಲಿ ಕುಟುಂಬದ ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಗುರುರಾಜ್, ಸ್ಥಳೀಯರಾದ ಮಲ್ಲಿಕಾರ್ಜುನ್ ಸೋಮಶೇಖರ್, ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.