ಗಾಂಧಿನಗರ ಶಿಕ್ಷಕಿಯೊಬ್ಬರ ಪುತ್ರನ ಮದುವೆ ನಿಮಿತ್ತ ಶಾಲೆಗೆ ರಜೆ, ಮುಖ್ಯಗರು, ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶಿಕ್ಷಕಿಯೊಬ್ಬರ ಪುತ್ರನ ಮದುವೆ ನಿಮಿತ್ತ ಮುಖ್ಯಗುರುಗಳು ಶಾಲೆಗೆ ರಜೆ ನೀಡಿದ ಪ್ರಸಂಗ ಮಂಗಳವಾರ ಬೆಳಕಿಗೆ ಬಂದಿದೆ.
ಚಿತ್ತಾಪುರ ಮತಕ್ಷೇತ್ರದ ಗಾಂಧಿನಗರ (ಸೀತಾರಾಮವಾಡಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಶೀಲಾಬಾಯಿ ಅವರ ಮಗನ ಮದುವೆ ಪ್ರಯುಕ್ತ ಮಂಗಳವಾರ ಅರ್ಧ ದಿನಕ್ಕೆ ಶಾಲೆ ರಜೆ ನೀಡಲಾಗಿದೆ ಎಂದು ಮುಖ್ಯಗುರುಗಳು ನಡಾವಳಿ ಪುಸ್ತಕದಲ್ಲಿ ನಮೂದಿಸಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಶಾಲೆಗಳಿಗೆ ರಜೆ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇದೆ. ಹೀಗಿರುವಾಗ ಇಲ್ಲಿನ ಮುಖ್ಯಗುರುಗಳು ಮಾತ್ರ ಸರ್ಕಾರದ ಹಾಗೂ ಶಿಕ್ಷಣ ಇಲಾಖೆಯ ನಿಯಮಗಳು ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದಂತೆ ಸರ್ವಾಧಿಕಾರಿಯಂತೆ ವರ್ತಿಸಿರುವುದು ಮೇಲ್ನೋಟಕ್ಕೆ ಸ್ವಷ್ಟವಾಗಿ ಕಂಡುಬಂದಿದೆ.
ನಿತ್ಯ 12.40 ಕ್ಕೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಬೇಕಾದ ಮುಖ್ಯಗುರುಗಳು ಮಂಗಳವಾರ 12 ಗಂಟೆಗೆ ಬಿಸಿಯೂಟ ನೀಡಿ 1 ಗಂಟೆಗೆ ಶಾಲೆಗೆ ಬೀಗ ಹಾಕಿ ಎಲ್ಲಾ ಶಿಕ್ಷಕರು ಮದುವೆಗೆ ತೆರಳಿದ ಘಟನೆ ಜರುಗಿದೆ.
ಟೀಚರ್ ಮಗನ ಮದುವೆ ಇದೆಯಂತೆ ಅದಕ್ಕೆ ಬಿಸಿಯೂಟ ಮಾಡಿಸಿ ಮಧ್ಯಾಹ್ನದ ಶಾಲೆ ಇರುವುದಿಲ್ಲ ಎಂದು ಹೇಳಿ ಮನೆಗೆ ಕಳುಹಿಸಿದ್ದಾರೆ ಎಂದು ಶಾಲಾಮಕ್ಕಳು ತಿಳಿಸಿದ್ದಾರೆ.
ಬಹುತೇಕ ಕೂಲಿಕಾರ್ಮಿಕರು ಇರುವ ಪ್ರದೇಶವಾದ ಗಾಂಧಿನಗರ, ಇಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಪಾಲಕರು ಕೂಲಿ ಕೆಲಸಕ್ಕೆ ಹೋಗುತ್ತಾರೆ ಇಂತಹ ಸಂದರ್ಭದಲ್ಲಿ ಅರ್ಧ ದಿನಕ್ಕೆ ಶಾಲೆಗೆ ರಜೆ ನೀಡಿದ್ದಾರೆ, ಮಕ್ಕಳು ಎಲ್ಲಾದರೂ ಹೋಗಿ ಯಾವುದೇ ಅನಾಹುತ ಆದರೆ ಹೇಗೆ, ಈಗಾಗಲೇ ಮಕ್ಕಳ ಅನಾಹುತ ಪ್ರಕರಣಗಳು ರಾಜ್ಯದ ನಾನಾ ಕಡೆ ಸಂಭವಿಸಿದ ಸಾಕಷ್ಟು ಉದಾಹರಣೆಗಳು ಕಣ್ಮುಂದೆ ಇವೆ. ಒಬ್ಬ ಶಾಲಾ ಶಿಕ್ಷಕಿಯ ಮಗನ ಮದುವೆಗೆ ಇಡೀ ಶಾಲೆಯೇ ರಜೆ ನೀಡಿರುವುದು ಯಾವ ನ್ಯಾಯ ಇಂತಹ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಊಹಿಸಲು ಸಾಧ್ಯವೇ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಯುವರಾಜ್ ರಾಠೋಡ ಹಾಗೂ ತಿಮ್ಮಯ್ಯ ಅವರು ಪ್ರಶ್ನಿಸಿದ್ದಾರೆ. ಶಿಕ್ಷಕಿ ಮಗನ ಮದುವೆಗೆ ಮಕ್ಕಳ ಶಿಕ್ಷಣಕ್ಕೆ ಕತ್ತರಿ ಹಾಕಿದಂತಾಗಿದೆ ಕೂಡಲೇ ಇಲ್ಲಿನ ಬೇಜವಾಬ್ದಾರಿ ಮುಖ್ಯಗುರು ಹಾಗೂ ಎಲ್ಲಾ ಸಹಶಿಕ್ಷಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಿಕ್ಷಣಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ ಹಾಗೂ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಆದರೆ ಇಂತಹ ಶಿಕ್ಷಕರಿಂದ ಶೈಕ್ಷಣಿಕ ವ್ಯವಸ್ಥೆ ಮೇಲೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಮಕ್ಕಳ ಶಿಕ್ಷಣಕ್ಕೆ ಬ್ರೆಕ್ ನೀಡಿ ತಮ್ಮ ವೈಯಕ್ತಿಕ ಕಾರ್ಯಕ್ಕೆ ಶಾಲೆಗೆ ರಜೆ ನೀಡಿದ ಮುಖ್ಯಗುರುಗಳ ವಿರುದ್ಧ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಸ್ತಿನ ಕ್ರಮ ಕೈಗೊಳ್ಳಲು ಮುಂದಾಗುವರೋ ಎಂಬುದು ಕಾದುನೋಡಬೇಕಿದೆ.