ಚಿತ್ತಾಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಘೋಷಣೆ, ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳಾಪಟ್ಟಿ ಫೆ.28 ಕ್ಕೆ ಘೋಷಣೆಯಾಗುತ್ತಿದ್ದಂತೆ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಅಧ್ಯಕ್ಷ ಸ್ಥಾನ ಪ.ಜಾ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ) ಮೀಸಲಾತಿ ಅನ್ವಯ ಆಕಾಂಕ್ಷಿಗಳು ಅಧಿಕಾರಕ್ಕೇರಲು ತುದಿಗಾಲಲ್ಲಿ ನಿಂತಿದ್ದಾರೆ ಇದಕ್ಕೆ ಪೂರಕವಾಗಿ ಶತಾಯ ಗತಾಯ, ಸಾಕಷ್ಟು ಪ್ರಯತ್ನ ಮತ್ತು ಲಾಬಿ ಮಾಡುತ್ತಿರುವುದು ಗುಪ್ತವಾಗೇನು ಉಳಿದಿಲ್ಲ, ಈಗಾಗಲೇ ಅವರವರ ರಾಜಕೀಯ ಗಾಢ ಫಾದರಗಳ ಹಾಗೂ ಪಕ್ಷದ ಮತ್ತು ಆಯಾ ಸಮಾಜದ ಮುಖಂಡರಿಗೆ ಭೇಟಿ ಮಾಡಿ ಮನವಿ ಮಾಡಿದ್ದಾರೆ ಅಲ್ಲದೇ ತಂಡೋಪತಂಡವಾಗಿ ಬೆಂಗಳೂರಿಗೆ ಹೋಗಿ ಕ್ಷೇತ್ರದ ಶಾಸಕರು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿ ಮಾಡಿ ತಮ್ಮ ಕೃಪಾಶೀರ್ವಾದ ನಮ್ಮ ಮೇಲೆ ನಮ್ಮ ಸಮಾಜದ ಮೇಲೆ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇಷ್ಟಾದರೂ ಸಹ ಸಚಿವರು ಮಾತ್ರ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ ಎಲ್ಲ ಸದಸ್ಯರಿಗೆ ಭೇಟಿ ಮಾಡಿ ಅಂದಷ್ಟೇ ಹೇಳಿ ಕಳುಹಿಸಿದ್ದಾರೆ, ಹೀಗಾಗಿ ಆಕಾಂಕ್ಷಿಗಳು ಎಲ್ಲಾ ಸದಸ್ಯರಿಗೆ ವೈಯಕ್ತಿಕವಾಗಿ ಭೇಟಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಇಷ್ಟಾದರೂ ಇಂತಹವರೇ ಅಧ್ಯಕ್ಷರಾಗಬೇಕೆಂಬ ಯಾವೊಬ್ಬ ಸದಸ್ಯರು ಬಹಿರಂಗ ಹೇಳಿಕೆ ನೀಡುತ್ತಿಲ್ಲ ಹೀಗಾಗಿ ಆಕಾಂಕ್ಷಿಗಳ ಎದೆಬಡಿತ ಮತ್ತಷ್ಟು ಜೋರಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಬೇಬಿ ಬಾಯಿ ಸುಭಾಷ್ ಜಾಧವ ಮತ್ತು ಕಾಶಿಬಾಯಿ ಮರೆಪ್ಪ ಬೆಣ್ಣೂರಕರ್ ಅವರು ಆಕಾಂಕ್ಷಿಗಳಾಗಿದ್ದು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶೀಲಾ ಕಾಶಿ, ಶೈನಾಜಬೇಗಂ ಯಕ್ಸಾಲ್, ರಫಾತ್ ಫರ್ದನಾ, ಖಾಜಾಬೀ ಗುಲಾಮ್ ರಸೂಲ್ ಅವರ ಹೆಸರುಗಳು ಕೇಳಿಬರುತ್ತಿವೆ.
ಪುರಸಭೆ ಇತಿಹಾಸದಲ್ಲಿ ಇಲ್ಲಿವರೆಗೆ ಬಂಜಾರ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ ಹೀಗಾಗಿ ಸಾಮಾಜಿಕ ನ್ಯಾಯದಡಿಯಲ್ಲಿ ಈ ಬಾರಿ ಬಂಜಾರ ಸಮಾಜದ ಬೇಬಿಬಾಯಿ ಸುಭಾಷ್ ಜಾಧವ ಅವರಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ತಾಲೂಕು ಬಂಜಾರ ಸಮಾಜದ ಮುಖಂಡರು ಸಚಿವರಿಗೆ ಅಪೀಲು ಮಾಡಿದ್ದಾರೆ.
ನಾನು ಪುರಸಭೆ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದು ಬಿಜೆಪಿ ಮತದಾರರೇ ಹೆಚ್ಚಾಗಿರುವ ವಾರ್ಡ್ ನಲ್ಲಿ ಗೆದಿದ್ದೇನೆ, ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸಾಕಷ್ಟು ಶ್ರಮಿಸಿದ್ದೇನೆ ಅಲ್ಲದೇ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಭೂತ್ ನಂ.83, 84 ಮತ್ತು 85 ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲೀಡ್ ತರುವಲ್ಲಿ ಹಗಲಿರುಳು ಶ್ರಮಿಸಿದ್ದೇನೆ ಅದರಲ್ಲೂ ವಿಶೇಷವಾಗಿ ನಾನು ಬಿಎ, ಬಿ.ಇಡಿ ಪದವಿಧರನಾಗಿದ್ದು ನನಗೆ ಅಧ್ಯಕ್ಷರಾಗಿ ಮಾಡಬೇಕು ಎಂದು ಸದಸ್ಯೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಅವರು ಸಚಿವರಿಗೆ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಪುರಸಭೆಯಲ್ಲಿ ನಮ್ಮ ತಾಯಿ ಕಾಶಿಬಾಯಿ ಮರೆಪ್ಪ ಬೆಣ್ಣೂರಕರ್ ಅವರು ಹಿರಿಯ ಸದಸ್ಯರಾಗಿದ್ದು, ಒಮ್ಮೆ ಅವಕಾಶ ನೀಡಿ ನಮ್ಮ ತಾಯಿಯವರನ್ನು ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು ನೋಡುವ ಆಸೆಯಿದೆ ಮತ್ತು ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಇದೇ ಕೊನೆಯ ಚುನಾವಣೆ ಆಗಲಿದೆ ಹೀಗಾಗಿ ಇದೊಂದು ಬಾರಿ ಅವಕಾಶ ಮಾಡಿ ಕೊಡಿ ಎಂದು ಸಚಿವರಿಗೆ ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್ (ಸದಸ್ಯರ ಪುತ್ರ) ಅವರು ತಿಳಿಸಿದ್ದಾರೆ.
ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ 18, ಬಿಜೆಪಿ 5 ಸ್ಥಾನಗಳ ಬಲಾಬಲ ಇದೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತವಿದೆ ಹೀಗಾಗಿ ಪುರಸಭೆ ಆಡಳಿತದ ಗದ್ದುಗೆ ಏರಲು ಆಕಾಂಕ್ಷಿಗಳು ಹರಸಾಹಸ ಪಡುತ್ತಿದ್ದಾರೆ. ಕೊನೆಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಯಾರಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂಬುದೇ ತೀವ್ರ ಕುತೂಹಲ ಮೂಡಿಸಿದೆ.