ಚಿತ್ತಾಪುರ ಕುಡಿಯುವ ನೀರಿನ ತೊಂದರೆ ಆಗದಂತೆ ಹಾಗೂ ಮಳೆಗಾಲದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಸಿ ಪ್ರಭು ರೆಡ್ಡಿ ತಾಕೀತು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಹಾಗೂ ಮಳೆಗಾಲದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಡಿಯುವ ನೀರಿನ ಹಾಗೂ ಮುಂಗಾರು ಮಳೆ ನಿಮಿತ್ತ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಾಗ ಹಾಗೂ ಸರ್ಕಾರದ ಕೆಲಸಗಳಿಗೆ ಯಾರಾದರೂ ಅಡೆತಡೆ ಮಾಡಿದರೆ ಕೂಡಲೇ ನಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು.
ಆಗಾಗ ನೀರು ಟೆಸ್ಟಿಂಗ್ ಮಾಡಿಸಿ ಫೈಲಿಂಗ್ ಮಾಡಿ ಇದು ಬಹಳ ಗಂಭೀರವಾಗಿ ಪರಿಗಣಿಸಿ ಒಂದು ದಿನ ನೀರು ಇಲ್ಲದಿದ್ದರೆ ಹಾಹಾಕಾರ ಆಗುತ್ತದೆ ಆದರೆ ಕಲುಷಿತ ನೀರು ಸರಬರಾಜು ಆದಾಗ ತುಂಬಾ ಅನಾಹುತಗಳು ಸಂಭವಿಸುತ್ತವೆ ಹೀಗಾಗಿ ಜಾಗೃತಿ ವಹಿಸಿ ಎಂದು ಕಿವಿಮಾತು ಹೇಳಿದರು. ಚರಂಡಿ ಸ್ವಚ್ಛತೆ ಮಾಡಿಸಿದ ಜಿಪಿಎಸ್ ಫೋಟೋ ತೆಗೆದು ಗ್ರೂಪ್ ಗೆ ಹಾಕಿ ಎಂದರು.
ಚಿತ್ತಾಪುರ ನೀರಿಗೆ ಕೊರತೆ ಇಲ್ಲ, ಪಟ್ಟಣದಲ್ಲಿ ದೊಡ್ಡ ಪೈಪ್ ಒಂದು ಒಡೆದಿದ್ದರಿಂದ ನೀರಿನ ತೊಂದರೆ ಆಗಿದೆ ಪೈಪ್ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಹೇಳಿದಾಗ, ಪೈಪ್ ದುರಸ್ತಿ ವಿಳಂಬ ಮಾಡದೆ ತಕ್ಷಣ ಸರಿಪಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಹಾಯಕ ಆಯುಕ್ತರು ಸೂಚಿಸಿದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಕುಡಿಯುವ ನೀರು ಬರೀ ಬೇಸಿಗೆ ಕಾಲದ ಸಮಸ್ಯೆ ಅಲ್ಲ ವರ್ಷದ 12 ತಿಂಗಳ ಕಾಲ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರತಿ ಬಾರಿ ಮಳೆಗಾಲ ಸಮಯದಲ್ಲಿ ಬೆಳವಡಗಿ, ಕುಂದನೂರ, ಇಂಗಳಗಿ, ಮಾರಡಗಿ, ಬೆನ್ನಟ್ಟಿ, ಬೆಳಗುಂಪಾ, ಗುಂಡಗುರ್ತಿ ಸೇರಿದಂತೆ ಇತರೆ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುತ್ತವೆ ಹೀಗಾಗಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಈ ಗ್ರಾಮಗಳಲ್ಲಿ ಏನೆ ಆದರೂ ನೀವೇ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಒಂದು ವೇಳೆ ಪ್ರವಾಹ ಉಂಟಾಗಿ ಗ್ರಾಮಗಳ ಜನರನ್ನು ಶಿಫ್ಟ್ ಮಾಡಲು ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಗೋದಾಮುಗಳಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಿ ಅಲ್ಲಿ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರಾಥಮಿಕ ಚಿಕಿತ್ಸೆ ಒದಗಿಸುವ ಕಡೆ ಜಾಗೃತಿ ವಹಿಸಿ ಎಂದು ಸೂಚಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ ಮಾತನಾಡಿ, ಹಲಕಟ್ಟಿ, ರಾಜೋಳ್ಳಾ ಮತ್ತು ಇವಣಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ, ಹೀಗಾಗಿ ಪೈಪ್ ಲೈನ್ ಒಡೆದಾಗ ಕೂಡಲೇ ಸರಿಪಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿ ಎಂದು ಹೇಳಿದರು.
ಸಭೆಯಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ತಾಪಂ ಎಡಿ ಪಂಡಿತ್ ಸಿಂದೆ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ವಾಡಿ ಮುಖ್ಯಾಧಿಕಾರಿ ಫಕ್ರುದ್ದೀನ್ ಸಾಬ್, ಕೃಷಿ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್, ಕುಡಿಯುವ ನೀರಿನ ಅಧಿಕಾರಿ ರಾಜಕುಮಾರ್ ಅಕ್ಕಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.