ಚಿತ್ತಾಪುರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಪುರಸಭೆ ಆಡಳಿತ ವಿರುದ್ಧ ಸಾರ್ವಜನಿಕರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಂಬೇಡ್ಕರ್ ನಗರ, ಕಾಶಿ ಗಲ್ಲಿ, ಇಂದಿರಾ ನಗರ, ಆಶ್ರಯ ಕಾಲೋನಿ ಹಾಗೂ ಬಾಹರಪೇಟ್ ಏರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಮಹಿಳೆಯರು ಖಾಲಿ ಕೊಡ ಹಿಡಿದುಕೊಂಡು ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಆದರೂ ಸ್ಥಳೀಯ ಪುರಸಭೆ ಆಡಳಿತ ಪರಿಹಾರೋಪಾಯ ಕ್ರಮ ಕೈಗೊಳ್ಳದೇ ಮೌನವಹಿಸಿದ್ದರಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಹಿಡಿ ಶಾಪವನ್ನು ಹಾಕಿದ್ದಾರೆ.
ಅಂಬೇಡ್ಕರ್ ನಗರದಲ್ಲಿ ಕಳೆದ ಒಂದು ವಾರದಿಂದ ಕುಡಿವ ನೀರಿನ ಸಮಸ್ಯೆ ತಲೆದೋರಿದೆ ಈ ಕುರಿತು ಪುರಸಭೆ ಅಧಿಕಾರಿಗಳ ಹಾಗೂ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಇಲ್ಲಿನ ನಿವಾಸಿಗಳು ಕೊಡ ನೀರಿಗಾಗಿ ಅಲೆಯುವಂತಾಗಿದೆ. ಸ್ಥಿತಿವಂತರು ಟ್ಯಾಂಕರ್ ನೀರು ತೋರಿಸಿಕೊಳ್ಳುತ್ತಾರೆ ಸಾಮಾನ್ಯ ಜನರ ಸ್ಥಿತಿ ಅಧೋಗತಿ ಎನ್ನುವಂತಾಗಿದೆ ಹೀಗಾಗಿ ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ ಸಮರ್ಪಕವಾಗಿ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಆಗ್ರಹಿಸಿದ್ದಾರೆ.
ದಂಡೋತಿ ಸಮೀಪದ ಕಾಗಿಣಾ ನದಿಯಿಂದ ಚಿತ್ತಾಪುರ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತಿದೆ. ನದಿಯಲ್ಲಿ ಸಾಕಷ್ಟು ನೀರು ಇದ್ದರೂ ಸಹ ಬೇಸಿಗೆ ಕಾಲವಾಗಿದ್ದರಿಂದ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ ಚಿತ್ತಾಪುರ ಸುತ್ತಮುತ್ತ ನದಿಗಳು, ಬ್ರಿಜ್ ಕಂ ಬ್ಯಾರೇಜ್ ಮತ್ತು ಕೆರೆಗಳು ಇವೆ ಆದರೂ ನಮ್ಮಲ್ಲಿ ನೀರಿನ ಸಮಸ್ಯೆ ಇರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಒಂದೆಡೆ ಆದರೆ ಇನ್ನೊಂದೆಡೆ ಪುರಸಭೆಯವರು ನಿತ್ಯ ಸರಿಯಾದ ಸಮಯಕ್ಕೆ ನೀರು ಪೂರೈಕೆ ಮಾಡುವುದಿಲ್ಲ ಒಮ್ಮೆ ಬೆಳಿಗ್ಗೆ, ಒಮ್ಮೆ ಮಧ್ಯಾಹ್ನ, ಒಮ್ಮೆ ಸಂಜೆ ಹೊತ್ತು ಹೀಗೆ ತಮಗೆ ಮನಸಿಗೆ ಬಂದಂತೆ ನೀರು ಬಿಡುತ್ತಾರೆ ಇದರಿಂದ ಮನೆಯ ಇತರೆ ಕೆಲಸಕಾರ್ಯಗಳನ್ನು ಬಿಟ್ಟು ಮಹಿಳೆಯರು ನೀರಿಗಾಗಿಯೇ ಇಡೀ ದಿನ ಕಳೆಯುವಂತಾಗಿದೆ.
ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಹೊಣೆ ಹೊತ್ತ ಪುರಸಭೆ ಆಡಳಿತ ಕೂಡಲೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕುಡಿಯುವ ನೀರು ಸರಬರಾಜು ಮಾಡಬೇಕು ಹಾಗೂ ನಿತ್ಯ ನಿಗದಿತ ಸಮಯಕ್ಕೆ ನೀರು ಪೂರೈಕೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

