ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನಾಗಾವಿ ನಾಡು
ನಾಳೆ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ (ಜಾತ್ರಾ ಮಹೋತ್ಸವ) ಅ.17 ರಂದು ಸೀಗಿ ಹುಣ್ಣಿಮೆ ದಿನದಂದು ಬಹಳ ಅದ್ದೂರಿಯಾಗಿ ನಡೆಯಲಿದ್ದು ಎಲ್ಲ ಭಕ್ತರೂ ಆ ಕ್ಷಣವನ್ನು ಕಣ್ತುಂಬ ನೋಡಲು ಕಾತುರದಲ್ಲಿದ್ದಾರೆ.
ಪಟ್ಟಣದ ಶ್ರೀ ಲಚ್ಚಪ್ಪ ಮಲ್ಲಾರರಾವ್ ನಾಯಕ ನಿವಾಸದಲ್ಲಿ ಮದ್ಯಾಹ್ನ 1.30 ಗಂಟೆಗೆ ಪಟ್ಟಣದ ಪ್ರಮುಖರ ಉಪಸ್ಥಿತಿಯಲ್ಲಿ, ಶ್ರೀ ಗಣಪತಿ ಪೂಜೆ, ಶ್ರೀ ಗುರು ಪೂಜೆ, ಶ್ರೀ ದೇವಿ ಪಾದುಕಾ ಪೂಜೆ ಮತ್ತು ಶ್ರೀ ದೇವಿ ಪಲ್ಲಕ್ಕಿ ಪೂಜೆಗಳು ನಡೆಯುವವು. ಮದ್ಯಾಹ್ನ 2 ಗಂಟೆಗೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವವು ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಶ್ರೀ ದೇವಿ ದೇವಸ್ಥಾನ ತಲುವುವುದು. ಶ್ರೀ ದೇವಿಯ ಉತ್ಸವ ಮೂರ್ತಿಯೊಂದಿಗೆ ಐದು ಪುದಕ್ಷಿಣೆ ಮತ್ತು ಮಹಾಮಂಗಳಾರತಿದೊಂದಿಗೆ ಕಾರ್ಯಕ್ರಮ ಸಂಪೂರ್ಣಗೊಳ್ಳುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರು ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.
ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನಾಗಾವಿ ನಾಡು: ನಾಗಾವಿ ಯಲ್ಲಮ ದೇವಿಯ ಪಲ್ಲಕ್ಕಿ ಉತ್ಸವಕ್ಕೆ ಈ ಬಾರಿ ಹೊಸ ಮೆರುಗು ನೀಡಲು ಯುವಪಡೆ ಮುಂದಾಗಿ ಹಗಲು ರಾತ್ರಿ ಎನ್ನದೆ ಶ್ರಮವಹಿಸಿದ್ದರಿಂದ ನಾಗಾವಿ ನಾಡು ದೀಪಾಲಂಕಾರದಿಂದ ಕಂಗೊಳಿಸುತ್ತಿದೆ, ಸಂಜೆ ಆಗುತ್ತಿದ್ದಂತೆ ಬಣ್ಣ ಬಣ್ಣದ ಸೀರಿಯಲ್ ಲೈಟಿಂಗ್ ದೀಪಾಲಂಕಾರ ಹಾಗೂ ಸ್ವಾಗತ ಕಮಾನು ಎಲ್ಲರನ್ನೂ ಸೆಳೆಯುತ್ತದೆ ಇದನ್ನು ಕಣ್ತುಂಬ ನೋಡಲು ಮನೆಮಂದಿ ಕುಟುಂಬ ಸಮೇತ ಒಂದು ಸುತ್ತು ಹಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತಿದೆ. ಯುವಕರ ಒಗ್ಗಟ್ಟಿನ ಈ ಸೇವೆ ಇಡೀ ಜಿಲ್ಲೆಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು. ಆ ನಿಟ್ಟಿನಲ್ಲಿ ತಾಯಿ ನಾಗಾವಿ ಯಲ್ಲಮ ದೇವಿಯ ಸೇವೆಗೆ ಯುವಕರು ಸಿದ್ದರಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಒಂಟಿ ಕಮಾನ್ ಹತ್ತಿರದ ಎರಡು ಬದಿಯ ಗೋಡೆಗಳಿಗೆ ನಾಗಾವಿ ಕ್ಷೇತ್ರದ ಐತಿಹಾಸಿಕ ಮಂದಿರಗಳ, ದೇವಸ್ಥಾನಗಳ ಕುರಿತು ಚಿತ್ರಗಳು ಬಿಡಿಸಿರುವುದು ಎಲ್ಲರ ಆಕರ್ಷಣೆಯಾಗಿದೆ.
ಯುವಕರ ಕಾರ್ಯಕ್ಕೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮತ್ತು ಊರಿನ ಹಿರಿಯರು ಸೇರಿದಂತೆ ಎಲ್ಲರೂ ಸಾತ್ ನೀಡಿದ್ದಾರೆ.
ಮೆರವಣಿಗೆಯಲ್ಲಿ ಬಾಜಾ ಭಜಂತ್ರಿ, ಡೊಳ್ಳು ಹೊಲಿಗೆ ವಾದನ, ಡಿಜೆ ಸೌಂಡ್, ಯುವಕರ ನೃತ್ಯ, ಲೈಜೀಮ್ ಎಲ್ಲರ ಕಣ್ಮನ ಸೆಳೆಯಲಿದೆ. ಪಲ್ಲಕ್ಕಿ ಮೆರವಣಿಗೆಯ ರಸ್ತೆ ಉದ್ದಕ್ಕೂ ಭಕ್ತರು ಕುಡಿಯುವ ನೀರು, ವಿವಿಧ ತರಹ ಪ್ರಸಾದ್, ಹೆಣ್ಣು ಹಂಪಲು, ಪಾನೀಯ ಮತ್ತು ಹಾಲು, ಅನ್ನ ಪ್ರಸಾದ ಮತ್ತು ಔಷಧ ವಿತರಣೆ ಸೇರಿದಂತೆ ಅನೇಕ ರೀತಿಯ ಭಕ್ತಿ ಸೇವೆ ನಡೆಯಲಿದೆ. ಹೀಗಾಗಿ ಈ ಬಾರಿ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಸಹ ಎಲ್ಲಾ ರೀತಿಯ ಬಂದೋಬಸ್ತ್ ಒದಗಿಸಿದ್ದಾರೆ.