Oplus_0

ಚಿತ್ರನಟ ವಿಜಯರಾಘವೇಂದ್ರ ಆಗಮನ, 5 ಸಾವಿರ ಜನರು ಭಾಗಿ | ಸೆ. 16 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ: ವಿನಯ ಗುತ್ತೇದಾರ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇದೇ ಸೆ.16 ರಂದು ನಗರದ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಜಯಂತೋತ್ಸವ ಸಮಿತಿ ಅಧ್ಯಕ್ಷ ಡಾ.ವಿನಯ. ಬಿ ಗುತ್ತೇದಾರ ಗಾರಂಪಳ್ಳಿ ಹೇಳಿದರು.

ನಗರದ ಆಮಂತ್ರಣ ಹೊಟೇಲ್ ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 5 ಅಡಿ ಎತ್ತರದ ಮೂರ್ತಿಯ ಭವ್ಯ ಶೋಭಾ ಯಾತ್ರೆ ನಡೆಯಲಿದೆ. ಡಿಜೆಗೆ ಬ್ರೇಕ್ ಹಾಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಾ. ಎಸ್. ಎಂ. ಪಂಡಿತ ರಂಗಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜೀವಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಹಾಗೂ ಇತರ ತಜ್ಞರಿಂದ ಉಚಿತ ಕಣ್ಣಿನ ತಪಾಸಣೆ ನಡೆಸಲಾಗುವುದು ಹಾಗೂ 11 ಜನ ಬಡ ಮಕ್ಕಳಿಗೆ ದತ್ತು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದೇ ಸಂದರ್ಭದಲ್ಲಿ ಎಂಎಲ್ಸಿ ಜಗದೇವ ಗುತ್ತೇದಾರ ಅವರಿಗೆ ವಿಶೇಷ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ಶ್ರೀ ನಾರಾಯಣಗುರು ಶಕ್ತಿಪೀಠ ಕರದಾಳ ಪೀಠಾಧಿಪತಿ ಡಾ. ಪ್ರಣವಾನಂದ ಮಹಾಸ್ವಾಮಿಗಳು, 9ನೇ ಮಹಾದಾಸೋಹ ಪೀಠಾಧಿಪತಿ ಶರಣಬಸವೇಶ್ವರ ಸಂಸ್ಥಾನ ಕಲಬುರಗಿ ಶ್ರೀ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು, ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.  ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.  ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ, ಕೆಕೆಆರ್’ಡಿ ಅಧ್ಯಕ್ಷ ಡಾ. ಅಜಯಸಿಂಗ್, ಶಾಸಕರಾದ ಅಲಂಪ್ರಭು ಪಾಟೀಲ, ಬಸವರಾಜ ಮತ್ತಿಮುಡ್, ಕನೀಜ್ ಫಾತೀಮಾ, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಜಗದೇವ ಗುತ್ತೇದಾರ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೇದಾರ, ಸುಭಾಷ ಆರ್ ಗುತ್ತೇದಾರ ಸೇರಿದಂತೆ ಸಮಾಜದ ಹಿರಿಯರು, ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.

ಕರದಾಳ ನಾರಾಯಣ ಗುರು ಶಕ್ತಿ ಪೀಠದ ಡಾ‌. ಪ್ರಣವಾನಂದ ಮಹಾಸ್ವಾಮಿಗಳು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಕೇವಲ ಒಂದು ಜನಾಂಗದ ಗುರುಗಳಲ್ಲ ಅವರು ಮಾನವ ಜನಾಂಗದ ಗುರು, ವಿಶ್ವಮಾನವ ಗುರು, ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ. ಅವರು ಹೇಳಿಕೊಟ್ಟ ಸಂದೇಶಗಳ ಮೂಲಕ ಶಾಂತಿ ಪಥದಲ್ಲಿ ನಡೆಯೋಣ. ಈ ದಾರಿಯಲ್ಲಿ ನಡೆದು ಕೃತಾರ್ಥರಾಗಲು ಪ್ರಯತ್ನಿಸೋಣ ಎಂದು ಹೇಳಿದರು.

ಈ ಬಾರಿ ಜಿಲ್ಲೆಯಲ್ಲಿ ಗುರುಗಳ ಜಯಂತ್ಯೋತ್ಸವ ಅರ್ಥಪೂರ್ಣವಾಗಿ ನಡೆಯಲಿದೆ ಈಗಾಗಲೇ ಜಯಂತಿ ಸಮಿತಿಯವರು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಖ್ಯಾತ ನಟ ವಿಜಯರಾಘವೇಂದ್ರ ಆಗಮಿಸುತ್ತಿದ್ದಾರೆ ಹೀಗಾಗಿ ಅಂದಾಜು 5 ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಯಂತಿ ಸಮಿತಿಯ ಪದಾಧಿಕಾರಿಗಳಾದ ಶಿವರಾಜ ಗುತ್ತೇದಾರ ಜೇವರ್ಗಿ, ಜಗದೇವ ಗುತ್ತೇದಾರ ಕಲ್ಲಬೇನೂರ, ಕಾಶಿನಾಥ ಗುತ್ತೇದಾರ ಚಿತ್ತಾಪುರ, ಮಲ್ಲಿಕಾರ್ಜುನ ಗುತ್ತೇದಾರ ಕುಕ್ಕುಂದಿ, ಮಹೇಶ ಗುತ್ತೇದಾರ ಹೋಳಕುಂದಾ, ದೇವಿಂದ್ರ ಗುತ್ತೇದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!