ಕಾಳಗಿ, ಯಡ್ರಾಮಿ, ಇಜೇರಿ, ಫರಹತಾಬಾದ್ ಹಾಗೂ ಹಿರೇಸಾವಳಗಿಯ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲೆಯ ಕಾಳಗಿ ಹಾಗೂ ಯಡ್ರಾಮಿಯ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನು 50 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಹಾಗೂ ಜೇವರ್ಗಿ ತಾಲೂಕಿನ ಇಜೇರಿ ಹಾಗೂ ಕಲಬುರಗಿ ತಾಲೂಕಿನ ಫರಹತಾಬಾದ್ ಮತ್ತು ಹಿರೇಸಾವಳಗಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳ ಸಮುದಾಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಳಗಿ ಹಾಗೂ ಯಡ್ರಾಮಿ ಗ್ರಾಮಗಳು ತಾಲೂಕು ಕೇಂದ್ರಗಳಾಗಿವೆ. ಇಲ್ಲಿ ಪ್ರಸ್ತುತ 30 ಹಾಸಿಗೆಗಳ ಸಮುದಾಯ ಕೇಂದ್ರಗಳಿದ್ದು ಅವುಗಳನ್ನು 50 ಹಾಸಿಗೆಗಳ ಸಮುದಾಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಜೊತೆಗೆ ಇಜೇರಿ, ಫರಹತಾಬಾದ್ ಹಾಗೂ ಹಿರೇಸಾವಳಗಿ ಗ್ರಾಮಗಳು ಭವಿಷ್ಯದಲ್ಲಿ ಬೆಳವಣಿಗೆ ಹೊಂದುವ ಗ್ರಾಮಗಳಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಪ್ರಸ್ತುತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವುದು ಅಗತ್ಯ ಹಾಗೂ ಅವಶ್ಯಕವಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರಿಗೆ ಪತ್ರ ಬರೆದು ಕೋರಲಾಗಿತ್ತು. ಅದರಂತೆ ಸ್ಪಂದಿಸಿದ ಸಚಿವರು ಯಡ್ರಾಮಿ ಹಾಗೂ ಕಾಳಗಿ ಸಮುದಾಯ ಆರೋಗ್ಯ ಕೇಂದ್ರಗಳನ್ನು 50 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಹಾಗೂ ಇಜೇರಿ, ಫರಹತಾಬಾದ್ ಹಾಗೂ ಹಿರೇಸಾವಳಗಿ ಗ್ರಾಮಗಳಲ್ಲಿರುವ ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕಲಬುರಗಿ ಜಿಲ್ಲೆಯ ಜನರಿಗೆ ನೀಡಿದ ಭರವಸೆಯಂತೆ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ದಿಗೆ ಕ್ರಮವಹಿಸಿದ್ದು, ಜನರ ಬೇಡಿಕೆಯಂತೆ ನೂತನ ಆರೋಗ್ಯ ಕೇಂದ್ರಗಳ ಸ್ಥಾಪನೆ ಹಾಗೂ ಪ್ರಸ್ತುತ ಇರುವ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮಹತ್ತರ ಕಾರ್ಯಕ್ಕೆ ಕೈ ಹಾಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರ ಸ್ಪಂದನೆ ಪ್ರಮುಖವಾಗಿದೆ ಎಂದು ಸಚಿವರು ಹೇಳಿದ್ದಾರೆ.

