ವಾಡಿ ಪಟ್ಟಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 129ನೇ ಜನ್ಮದಿನಾಚರಣೆ
ನಾಗಾವಿ ಎಕ್ಸಪ್ರೆಸ್
ವಾಡಿ: ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 129ನೇ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಎಮ್.ಪಿ.ಹೆಚ್.ಎಸ್ ಶಾಲೆಯಿಂದ ಮಹಾತ್ಮ ಗಾಂಧಿ ವೃತದ ವರೆಗೆ ನೂರಾರು ವಿದ್ಯಾರ್ಥಿಗಳು ನೇತಾಜಿ ಅವರ ಭಾವಚಿತ್ರ ಹಿಡಿದುಕೊಂಡು, ಘೋಷಣೆಗಳನ್ನು ಕೂಗುತ್ತ ಬೃಹತ್ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ವಾಡಿ ಜನಧ್ವನಿ ಜಾಗೃತ ಸಮಿತಿ ಗೌರವಾಧ್ಯಕ್ಷ ಜಯದೇವ ಜೋಗಿಕಲ್ ಮಠ ಅವರು ನೇತಾಜಿ ಭಾವ ಚಿತ್ರಕ್ಕೆ ಹೂ ಮಾಲೆ ಹಾಕುವುದರ ಮೂಲಕ ಈ ಮೇರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜೀರಹಿತ ಹೋರಾಟ ಕಟ್ಟಿದ ನೇತಾಜಿ ಅವರ ಹೋರಾಟ ಮತ್ತು ಸಂಘರ್ಷ ಭರಿತ ಜೀವನ ಎಷ್ಟೋ ಜನ ಯುವಕ ಯುವತಿಯರನ್ನು ನಿಸ್ವಾರ್ಥ ಮನೋಭಾವದಿಂದ ಸಮಾಜದ ಏಳಿಗೆಗೆ ಶ್ರಮಿಸಲು ಇವತ್ತಿಗೂ ಪ್ರೇರೇಪಿಸುತ್ತಿದೆ. ಅವರಂತೆಯೇ ಇಂದಿನ ವಿದ್ಯಾರ್ಥಿಗಳು -ಯುವಕರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಅನ್ಯಾಯ ವಿರುದ್ಧ ಸಿಡಿದೇಳಬೇಕೆಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಕಾರ್ಯದರ್ಶಿ ಮಹೇಶ್ ಎಸ್.ಜಿ ಮಾತನಾಡುತ್ತಾ, ನೇತಾಜಿ ಅವರ ತ್ಯಾಗ ಮತ್ತು ಬಲಿದಾನ ನಮ್ಮೆಲ್ಲರಿಗೂ ಆದರ್ಶ, ಬ್ರಿಟಿಷ್ ರ ಅಸಮಾನತೆ ಮತ್ತು ತಾರತಮ್ಯದ ವಿರುದ್ಧ ನೇತಾಜಿ ಧ್ವನಿ ಎತ್ತಿದರೂ. ಅನ್ಯಾಯ ಮತ್ತು ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳುವದಕ್ಕಿಂತ ದೊಡ್ಡ ಅಪರಾಧ ಮತ್ತೊಂದಿಲ್ಲ ಎಂಬ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಂದೇಶ ವಿದ್ಯಾರ್ಥಿ ಯುವಜನರು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇನ್ನೊಂದೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಭಾಗವಾಗಿ ” KPS ಮ್ಯಾಗ್ನೆಟ” ಶಾಲೆಗಳನ್ನು ತೆಗೆಯುತ್ತಿರುವ ಕರ್ನಾಟಕ ಸರ್ಕಾರದ ಯೋಜನೆಯನ್ನು ವಿರೋಧಿಸಿದರು. ಜಾತಿ ಮತ್ತು ಧರ್ಮದ ಕಲಹಗಳು ಸೃಷ್ಟಿ ಮಾಡುವುದು ಬಂಡವಾಳಶಾಹಿಗಳು ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಶೋಷಣೆ ಇಲ್ಲದ ಸಮಾಜವಾದಿ ಭಾರತ ಕಟ್ಟಬೇಕೆಂದು, ಹೋರಾಟದ ಸಮರ ಸಾರಿದ ನೇತಾಜಿಯ ನಾಡಿನಲ್ಲಿ ಇಂದು ಆಳುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನವಿರೋಧಿ ನೀತಿಗಳನ್ನು ಜಾರಿ ಮಾಡಿ ಜನಗಳನ್ನು ಅತ್ಯಂತ ಶೋಷಣೆಗೆ ತಳ್ಳುತ್ತಿವೆ. ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು, ಮರ್ಯಾದೆ ಹಿನ ಹತ್ಯೆಗಳು ಸಮಾಜದ ಕ್ರೂರ ರೂಪಗಳನ್ನು ಎತ್ತಿತೊರಿಸುತ್ತಿದೆ. ಕ್ರಾಂತಿಕಾರಿಗಳು ಗಳಿಸಿದ ಆಶಯವನ್ನು ನಾಶಪಡಿಸಿ ರೈತ ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ದೂರಮಾಡಲು ಅತಿ ವೇಗವಾಗಿ ಮುನ್ನುಗ್ಗುತ್ತಿದೆ. ದುಡಿಯುವ ಕೈಗಳಿಗೆ ಕೆಲಸಗಳು ಕೊಡದೆ ಯುವಕರನ್ನು ಸರ್ಕಾರವೇ ನೇರವಾಗಿ ಅಡ್ಡದಾರಿ ಹಿಡಿಯುವಂತೆ ಮಾಡುತ್ತಿವೆ. ನೇತಾಜಿ ಅವರ 129ನೇ ಜನ್ಮದಿನದ ಈ ಸಂದರ್ಭದಲ್ಲಿ ಇಂತಹ ಸರ್ಕಾರಗಳ ಕ್ರೂರ ನೀತಿಗಳ ವಿರುದ್ಧ ಹೋರಾಟದ ಸಮರ ಸಾರಲು ವಿದ್ಯಾರ್ಥಿ-ಯುವಕರು ಸಂಕಲ್ಪ ತೊಡಬೇಕಾಗಿದೆ ಎಂದು ಕರೆ ನೀಡಿದರು.
ಎಐಡಿಎಸ್ಓ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷ ಗೋವಿಂದ ಯಳವರ ಅಧ್ಯಕ್ಷತೆ ವಹಿಸಿದ್ದರು. ಎಐಡಿವೈಓ ವಾಡಿ ಸ್ಥಳೀಯ ಕಾರ್ಯದರ್ಶಿ ಗೌತಮ ಪರತೂರಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಶರಣು ಹೇರೂರು, ವೆಂಕಟೇಶ ದೇವದುರ್ಗ, ರಾಜು ವಡೆಯರ್, ಮಲ್ಲಣ್ಣ ದಂಡಬಾ, ಗೋದಾವರಿ ಕಾಂಬಳೆ, ಜಯಶ್ರೀ ಕುಂಬಾರ, ಶರಣಮ್ಮ ಕುಂಬಾರ, ದತ್ತಾತ್ರೇಯ ಹುಡೆಕರ್, ಸಾಬು ಸುಣಗಾರ, ಬೀಮು ಮಾಟನಳ್ಳಿ, ಚೌಡಪ್ಪ ಗಂಜಿ, ಶರಣು ದೋಸೆಟ್ಟಿ, ಮಲ್ಲಿಕಾರ್ಜುನ ಗಂದಿ ಹಾಗೂ ಪಟ್ಟಣದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

