ತಾಲೂಕು ಆಡಳಿತ ವತಿಯಿಂದ ಮಡಿವಾಳ ಮಾಚಿದೇವ ಜಯಂತಿ ಆಚರಣೆ | ಬಟ್ಟೆಯ ಮಲಿನತೆಗಿಂತ ಮನದ ಮಲಿನತೆ ತೊಲಗಲಿ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶರಣರು ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ವರ್ಣ ವ್ಯವಸ್ಥೆಯ ಭೇದಭಾವ ಹೋಗಲಾಡಿಸಲು ಶ್ರಮಿಸಿದ್ದಾರೆ. ಕೇವಲ ಬಟ್ಟೆಯ ಮಲಿನತೆ ತೊಳೆಯುವುದಲ್ಲ, ನಮ್ಮ ಮನದ ಮಲಿನತೆಯನ್ನು ಮೊದಲು ಹೋಗಲಾಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಕರೆ ನೀಡಿದರು.
ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಪ್ರಜಾಸೌಧ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶರಣ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬಾಹ್ಯ ಸ್ವಚ್ಛತೆಯ ಜೊತೆಗೆ ಆತ್ಮಶುದ್ಧಿಯೂ ಮುಖ್ಯ. ಶರಣರ ಕಾಯಕ ತತ್ವ ಇಡೀ ಮಾನವ ಕುಲಕ್ಕೆ ಆದರ್ಶವಾಗಿದೆ. ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ಅಳಿಯಬೇಕು. ನಮ್ಮ ಮಕ್ಕಳಿಗೆ ಪ್ರತಿದಿನ ಶರಣರ ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುವ ಕೆಲಸ ಮನೆಯಿಂದಲೇ ಆರಂಭವಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಸದಸ್ಯ ಶ್ಯಾಮ್ ಮೇಧಾ ಮಾತನಾಡಿ, ವಚನಗಳ ಮೂಲಕ ಸರ್ವರಿಗೂ ಸಮಬಾಳು-ಸಮಪಾಲು ಸಂದೇಶ ನೀಡಿದ ಮಾಚಿದೇವರ ತತ್ವಗಳನ್ನು ನಾವು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಯಂತಿಗಳು ಕೇವಲ ತೋರಿಕೆಗಾಗಿ ಇರಬಾರದು ಎಂದರು.
ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಸಾಬಣ್ಣ ಮುಡಬೂಳ್, ಪ್ರಮುಖರಾದ ಸುರೇಶ, ವಿಜಯಕುಮಾರ್ ದೇವೇಂದ್ರ, ಅಶೋಕ, ನಾಗಣ್ಣ ದಿಗ್ಗಾಂವ್, ಬಸವರಾಜ, ರಾಘವೇಂದ್ರ ಕೊಂಡಪಳ್ಳಿ, ಶಿವಕುಮಾರ್ ಹೆರೂರ್, ಸಿದ್ದರಾಜ್ ಹೂಗಾರ, ಮಲ್ಲಿಕಾರ್ಜುನ, ಗುರು, ವಿಶ್ವಾರಾಧ್ಯ, ರಮೇಶ ವಾಡಿ, ಗೌರೇಶ ಚಿಂಚಕರವಾಡಿ, ಶರಣಪ್ಪ ಬೆಳಗೇರಿ, ಮಹೇಶ ಬೆಳಗುಂಪಾ, ಸಂತೋಷ ಬೆಳಗುಂಪಾ, ಮಲ್ಲಿನಾಥ ಕೋಲಕುಂದಿ, ಪಂಡಿತ ಸಿಂಧ್ಯೆ ಹಾಗೂ ಮಂಜುನಾಥ ಗ್ರಾಮ ಸೇವಕ ಸೇರಿದಂತೆ ತಾಲೂಕು ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

