ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳ ಪೂರ್ವಭಾವಿ ಸಭೆ | ಬಸವ ಜಯಂತಿಯಂದು ಬಸವ ಭವನ, ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅಡಿಗಲ್ಲು: ನಾಗರೆಡ್ಡಿ ಪಾಟೀಲ ಕರದಾಳ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಸುಸಜ್ಜಿತ ಬಸವ ಭವನ ಹಾಗೂ ಸಮಾಜದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಪೂರಕವಾಗುವಂತೆ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮುಂಬರುವ ಬಸವ ಜಯಂತಿಯ ಪವಿತ್ರ ದಿನದಂದು ಅಡಿಗಲ್ಲು ಸಮಾರಂಭ ನೆರವೇರಿಸಲಾಗುವುದು ಎಂದು ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಘೋಷಿಸಿದರು.
ಪಟ್ಟಣದ ಹೊರವಲಯದ ಶಹಾಬಾದ ರಸ್ತೆಯಲ್ಲಿ ಬಸವ ಭವನಕ್ಕಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಭಾನುವಾರ ನಡೆದ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳ ಹಾಗೂ ವೀರಶೈವ ಸಮಾಜದ ಮುಖಂಡರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವ ಭವನ ನಿರ್ಮಾಣಕ್ಕಾಗಿ ಈಗಾಗಲೇ ಪಟ್ಟಣದ ಶಹಾಬಾದ ರಸ್ತೆಯಲ್ಲಿ 2 ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಯಾವುದೇ ಒತ್ತಡ ಇಲ್ಲದೇ ಟ್ರಸ್ಟ್‌ನಲ್ಲಿ ಮುಕ್ತ ಸದಸ್ಯತ್ವಕ್ಕೆ ಅವಕಾಶ ನೀಡಲಾಗಿದೆ. 2 ಲಕ್ಷ ರೂ. ದೇಣಿಗೆ ನೀಡುವವರು ಸದಸ್ಯರಾಗಲು ಅರ್ಹರಾಗಿದ್ದು, ಬಸವ ಜಯಂತಿ ಒಳಗಾಗಿ ಸದಸ್ಯರಾಗಲು ಅವಕಾಶವಿದ್ದು, ಈಗಾಗಲೇ 33 ಗಣ್ಯರು ಸದಸ್ಯತ್ವ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಬಸವ ಭವನದ ಜೊತೆಗೆ 50 ವಿದ್ಯಾರ್ಥಿನಿಯರ ವಸತಿ ನಿಲಯಕ್ಕಾಗಿ 10 ಕೋಣೆಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. 2 ಲಕ್ಷ ದೇಣಿಗೆ ನೀಡಿದವರ ಹೆಸರು ಕೋಣೆಗೆ ಹೆಸರು ಇಡಲಾಗುವುದು ಹಾಗೂ 1 ಲಕ್ಷ ದೇಣಿಗೆ ನೀಡಿದವರ ಕುಟುಂಬದವರಿಗೆ ಮದುವೆ ಸಮಾರಂಭಕ್ಕೆ ಭವನ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಚಿತ್ತಾಪುರ ಪಟ್ಟಣದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ 20 ವರ್ಷಗಳ ಹಿಂದೆಯೇ ಟ್ರಸ್ಟ್ ರಚನೆ ಮಾಡಿದ್ದು, ನಂತರದ ದಿನಗಳಲ್ಲಿ ಉಚಿತ ಸಾಮೂಹಿಕ ವಿವಾಹ ಮಾಡುವ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಾ ಬರಲಾಗಿತ್ತು. ಕೋರೋನಾ ಸಂದರ್ಭದಲ್ಲಿ ಜನರ ಆಸಕ್ತಿ ಕಡಿಮೆಯಾದ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯ ಕೈಬಿಡಲಾಗಿದೆ. ಜಿಲ್ಲೆಯಲ್ಲಿಯೇ ತಾಲೂಕು ಕೇಂದ್ರ ಸ್ಥಾನದಲ್ಲಿ ಮೊಟ್ಟ ಮೊದಲು ಬಸವೇಶ್ವರ ಮೂರ್ತಿ ಸ್ಥಾಪನೆ ಮಾಡಿದ್ದು ಚಿತ್ತಾಪುರದಲ್ಲಿ ಎಂದರು.
ಈಗ ಜಿಲ್ಲೆಯಲ್ಲಿಯೇ ಸುಸಜ್ಜಿತ ಬಸವ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣ ಮಾಡಲಾಗುವುದು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. 11 ಲಕ್ಷ ದೇಣಿಗೆ ನೀಡಿದವರ ಹೆಸರು ವಸತಿ ನಿಲಯಕ್ಕೆ ಇಡಲಾಗುವುದು ಸಭೆಯಲ್ಲಿ ಹೇಳುತ್ತಿದ್ದಂತೆ ಶರಣಪ್ಪ ಸಾಹು ಹೊಟ್ಟೆ ಬೊಮ್ಮನಳ್ಳಿ ಅವರು 11 ಲಕ್ಷ ದೇಣಿಗೆ ನೀಡಲು ಮುಂದೆ ಬಂದು, ಸ್ಥಳದಲ್ಲಿಯೇ 50 ಸಾವಿರ ಹಣ ನೀಡಿದರು.
ವೀರಶೈವ ಸಮಾಜವು ಶೈಕ್ಷಣಿಕವಾಗಿ ಹಿಂದುಳಿಯುತ್ತಿರುವುದು ವಿಷಾದನೀಯ. ಸರ್ಕಾರಿ ನೌಕರಿಗಳಲ್ಲಿ ನಮ್ಮವರ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಸತಿ ನಿಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಟ್ರಸ್ಟ್ ಕಾರ್ಯದರ್ಶಿ ನಾಗರಾಜ ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಅಂಬರೀಷ್ ಸುಲೇಗಾಂವ್ ಮಾತನಾಡಿ, ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವವರಿಗೆ ಟ್ರಸ್ಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಇದೇ ವೇಳೆ ಬಸವರಾಜ ಕೊಳ್ಳಿ ಅವರು 2 ಲಕ್ಷ ರೂ. ದೇಣಿಗೆ ನೀಡಿ ಟ್ರಸ್ಟಿಯಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ ಪಾಟೀಲ ಮುಡಬೂಳ, ಡಾ.ಚಂದ್ರಶೇಖರ ಕಾಂತಾ, ಅಶೋಕ ನಿಪ್ಪಾಣಿ, ಶ್ರೀನಿವಾಸ ರೆಡ್ಡಿ ಪಾಲಪ್, ಮಲ್ಲರೆಡ್ಡಿ ಗೋಪಸೇನ್, ಶಾಂತಕುಮಾರ್ ಹತ್ತಿ, ಎಸ್.ಎನ್.ಪಾಟೀಲ, ಬಸವರಾಜ ಸಂಕನೂರ, ಅನೀಲ್ ವಡ್ಡಡಗಿ, ವಿಶ್ವಾರಾಧ್ಯ ಪಾಟೀಲ, ಪ್ರಭುದೇವ್ ಬೊಮ್ಮನಳ್ಳಿ, ಬಸವರಾಜ ಕಾಳಗಿ, ಬಸವರಾಜ ಹೂಗಾರ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಬಸವರಾಜಗೌಡ ದೇಶಮುಖ, ಶೈಲುಗೌಡ ದಿಗ್ಗಾಂವ, ರವಿ ಗೊಬ್ಬುರ, ಅಂಬರೀಷ್ ಸುಲೇಗಾಂವ, ಶರಣು ಸಜ್ಜನಶೆಟ್ಟಿ, ಶಿವರಾಜ್ ಪಾಳೇದ್, ಮಲ್ಲಿಕಾರ್ಜುನ ಠಾಣಾಗುಂದಿ, ಸಿದ್ದಲಿಂಗ ಅನವಾರ, ಗೂಳಿನಾಥ ಮೊಗಲಾ, ಶರಣರೆಡ್ಡಿ ಗಡೇಸೂರ್, ರಾಚಪ್ಪ ಬೊಮ್ಮನಳ್ಳಿ, ವಿಶಾಲ ದಂಡಗುಂಡ, ರಾಜಶೇಖರ ಯದಲಾಪುರ್ ಸೇರಿದಂತೆ ಇತರರು ಇದ್ದರು.

