Oplus_0

ಎಐಸಿಸಿ ಅಧ್ಯಕ್ಷ ಖರ್ಗೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗೆ ಎಂಎಲ್ಸಿ ಜಗದೇವ ಗುತ್ತೇದಾರ ಖಂಡನೆ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯ ನಿವೃತ್ತಿ ಹೊಂದಬೇಕು ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮತ್ತು ಕಲಬುರಗಿ ಜಿಲ್ಲೆಯ ಕೆಲವು ಬಿಜೆಪಿ ನಾಯಕರ ಇಂತಹ ಅಸಮಂಜಸ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಕಾಳಗಿ ರವರು ಬಲವಾಗಿ ಖಂಡಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು, ಕರ್ನಾಟಕ ರಾಜ್ಯ ಹಾಗೂ ರಾಷ್ಟ್ರ ಕಂಡಂತಹ ಒಬ್ಬ ಹಿರಿಯ ಹಾಗೂ ಅನುಭವಿಯ ಅಪರೂಪದ ರಾಜಕಾರಣಿ. ಇಂತಹ ಹಿರಿಯ ಅನುಭವಿ ರಾಜಕಾರಣಿಯ ಕುರಿತು ಮಾತನಾಡುವಾಗ ಬಿಜೆಪಿ ಮುಖಂಡರು ಮೊದಲು ಸರಿಯಾಗಿ ತಿಳಿದುಕೊಂಡು ಅರಿತು ಮಾತನಾಡಲಿ ಎಂದು ಎಚ್ಚರಿಸಿದ್ದಾರೆ.

ಚುನಾವಣೆಯಲ್ಲಿ ಮತದಾರರ ಕೃಪಾರ್ಶಿವಾದದಿಂದ ಸುಮಾರು 11 ಬಾರಿ ಜಯಶೀಲರಾಗಿ ವಿಧಾನಸಭೆ, ಲೋಕಸಭೆಗೆ ಆಯ್ಕೆಗೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯಕ್ಕೆ ಮೇಲಾಗಿ ಕಲ್ಯಾಣ ಕರ್ನಾಟಕಕ್ಕೆ 371 (ಜೆ) ಕಲಂ ಜಾರಿಗೆ ತಂದು ರಾಜಕೀಯವಾಗಿ, ಸರ್ಕಾರಿ ಉದ್ಯೋಗದಲ್ಲಿ, ಸೇವಾ ಮುಂಬಡ್ತಿಯಲ್ಲಿ, ಶಿಕ್ಷಣದಲ್ಲಿ, ಮೂಲಭೂತ ಅಭಿವೃದ್ಧಿಯಲ್ಲಿ, ಕಾಮಗಾರಿಗಳ ವಿಶೇಷ ಅನುದಾನದಲ್ಲಿ ಹಾಗೂ ಇನ್ನಿತರವಾಗಿ ಈ ಹಿಂದುಳಿದ ಭಾಗಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ ಸೇವೆ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಈ ಭಾಗದ ಮತದಾರ ಪ್ರಭುಗಳು ಅವರನ್ನು ಕೈಬಿಡದೇ ಸತತವಾಗಿ ಚುನಾವಣೆಯಲ್ಲಿ ಗೆಲ್ಲಿಸುತ್ತಾ ಬಂದಿರುತ್ತಾರೆ. ಇದನ್ನು ಸಹಿಸದೇ ಖರ್ಗೆಜೀಯವರ ಮುಂದೆ ಜನಿಸಿ ಬೆಳೆದ ಬಿಜೆಪಿಯ ಕೆಲವು ಮುಖಂಡರು ಖರ್ಗೆಜೀಯವರ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ. ಇಂತಹ ಹಿರಿಯ ಅನುಭವಿ ರಾಜಕಾರಣಿಯು ಇನ್ನೂ ಹೆಚ್ಚು ವರ್ಷಗಳ ಕಾಲ ಅಧಿಕಾರದಲ್ಲಿದ್ದು ರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಜನರ ಆಗುಹೋಗುಗಳಿಗೆ ಮತ್ತು ಈ ಭಾಗದ ಅಭಿವೃದ್ಧಿಗೆ ಸೇವೆ ಸಲ್ಲಿಸಲಿ ಎಂದು ಹೇಳುತ್ತಾ ಬಿಜೆಪಿ ಯವರ ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಅವರು ಬಲವಾಗಿ ಖಂಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!