Oplus_0

ನೀರಿನ ಕೊರತೆ, ನಿರ್ವಹಣೆ ಕುರಿತು ಪಿಡಿಒಗಳ ಸಭೆ | ಕಾಳಗಿ ತಾಲೂಕಿನಲ್ಲಿ ನೀರಿನ ಕೊರತೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಸಿಇಒ ತಾಕೀತು 

ನಾಗಾವಿ ಎಕ್ಸಪ್ರೆಸ್ 

ಕಾಳಗಿ: ತಾಲೂಕಿನಲ್ಲಿ ಉಂಟಾಗಿರುವ ನೀರಿನ ಕೊರತೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಜಿಲ್ಲಾ ಪಂಚಾಯತ್ ಸಿಇಒ ಭಂವರಸಿಂಗ್ ಮೀನಾ ತಾಕೀತು ಮಾಡಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ನೀರಿನ ಕೊರತೆ, ನಿರ್ವಹಣೆಗೆ ಕುರಿತು ಪಿಡಿಒಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ನೀರಿನ ಕೊರತೆ ಸಹಾಯವಾಣಿ ಮಾಡಲಾಗಿದ್ದು, ನೀರಿನ ಸಮಸ್ಯೆಗಳ ಕುರಿತು ಸಾರ್ವಜನಿಕರು ಸಂಪರ್ಕಿಸಲು ಮೊಬೈಲ್ – 9945459708 ಸಂಖ್ಯೆಯನ್ನು ಬಳಸುವಂತೆ ತಿಳಿಸಲಾಗಿದೆ, ಈ ಸಂಖ್ಯೆಯನ್ನು ವ್ಯಾಪಕವಾಗಿ ಜನರಿಗೆ ತಿಳಿಸಲು ಪಿಡಿಒಗಳಿಗೆ ಸೂಚಿಸಿದರು.

ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳ ನಿಯಮಿತ ಸ್ವಚ್ಛತೆ ಹಾಗೂ ಕ್ಲೋರಿನೇಶನ್ ಕಾರ್ಯವನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಮಟ್ಟದಲ್ಲಿ ಎಫ್ಟಿಕೆ ಮೂಲಕ ನಿರಂತರ ಪರೀಕ್ಷೆಗಳನ್ನು ನಡೆಸುವಂತೆ ನಿರ್ದೇಶಿಸಿದರು.

ಪ್ರತಿ ಗ್ರಾಮ ಪಂಚಾಯತಿಯಲ್ಲಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಬೋರವೆಲ್ ಮೋಟಾರಗಳನ್ನು ಸ್ಪೇರ್ ಇಟ್ಟುಕೊಳ್ಳಬೇಕು. ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಖಾಸಗಿ ಬೋರ್‌ವೆಲ್‌ ಗಳೊಂದಿಗೆ ಓಡಂಬಡಿಕೆ ಮಾಡಿಕೊಂಡು ಬಳಸುವ ಕ್ರಮ ಕೈಗೊಳ್ಳುವಂತೆ ಹೇಳಿದರು.

ಹಿಂದೆ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಮೇಲೆ ವಿಶೇಷ ನಿಗಾ ವಹಿಸಿ, ಯಾವುದೇ ಸಮಸ್ಯೆ ಉಂಟಾದಲ್ಲಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ನಿರ್ದೇಶಿಸಿದರು.

ನೀರಿನ ಕೊರತೆ ನಿರ್ವಹಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ತಿಳಿಸಿ, ಎಲ್ಲಾ ಪಿಡಿಒಗಳು ಕ್ಷೇತ್ರ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.

ನೀರನ್ನು ಮಿತವಾಗಿ ಬಳಸುವಂತೆ ಹಾಗೂ ನೀರಿನ ಸಂರಕ್ಷಣೆಗೆ ಸಹಕರಿಸುವಂತೆ ಎಲ್ಲ ನಾಗರಿಕರಲ್ಲಿ ಮನವಿ ಮಾಡಿದರು.

ಇದಕ್ಕೂ ಮೊದಲು ಪಸ್ತಪುರ ತಾಂಡಾ, ಗಡಿಕೇಶ್ವರ ಹಾಗೂ ಮುಗುಟಾ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ಜಲಮುಲಗಳನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ, ಆರ್.ಡಬ್ಲು.ಎಸ್ ಎಇಇ ಉಮೇಶ್ ರಾಠೋಡ ಸೇರಿದಂತೆ ತಾಲೂಕ ಪಂಚಾಯತ್ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!