Oplus_0

ಶಹಾಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ | ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಯಲ್ಲಿ ಕಸಾಪ ಕೊಡುಗೆ ಅಪಾರ: ಆನೆಗುಂದಿ

ನಾಗಾವಿ ಎಕ್ಸಪ್ರೆಸ್ 

ಶಹಾಪುರ: ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಅಪಾರವಾಗಿದೆ ಎಂದು ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಹೇಳಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿಗಳು, ಭಾಷೆ ಉಳಿವಿಗೆ ಕೈಗೊಂಡ ದಿಟ್ಟತನದ ಕಾರ್ಯಗಳು ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಸಾಪ ಕನ್ನಡದ ವೈಭವವನ್ನು ಹರಡುತ್ತಿದೆ ಎಂದು ತಿಳಿಸಿದರು.

ಇಂದಿನ ಜಾಗತೀಕರಣದ ಯುಗದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಯುವ ಜನತೆಗೆ ಕನ್ನಡದ ಬಗ್ಗೆ ಆಸಕ್ತಿ ಬೆಳೆಸುವಲ್ಲಿ ಕಸಾಪ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಅತ್ಯಂತ ಶ್ಲಾಘನೀಯವಾಗಿದೆ. ಬಹುತೇಕ ಕನ್ನಡ ಅಭಿಮಾನಿಗಳು, ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಶಾಲೆಗಳಿಗೆ ಕಳುಹಿಸದೇ ಇಂಗ್ಲಿಷ್ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ‌. ಹೀಗಾದರೆ ಕನ್ನಡ ಉಳಿಯಲು ಹೇಗೆ ಸಾಧ್ಯ. ಆದ್ದರಿಂದ ಮೊದಲು ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಲು ಮುಂದಾಗೋಣ. ಅಂದಾಗ ಮಾತ್ರ ಕನ್ನಡ ಭಾಷೆ, ಶಾಲೆಗಳು ಉಳಿಯಲು ಎಂದು ಅಭಿಪ್ರಾಯಪಟ್ಟರು.

ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಅನ್ನು 1915ರಲ್ಲಿ ಸ್ಥಾಪಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ಮೈಸೂರು ಅರಸರ ಮಹತ್ವದ ಪಾತ್ರವಿದೆ. ಅದರಲ್ಲಿ ವಿಶೇಷವಾಗಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಕಸಾಪ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡ ಉತ್ತೇಜನ ದೊರೆಯಿತು. ಕಸಾಪಕ್ಕೆ ಹೆಚ್. ವಿ. ನಂಜುಂಡಯ್ಯ, ಬಿ. ಎಂ. ಶ್ರೀಕಂಠಯ್ಯ, ಅಲೂರು ವೆಂಕಟರಾವ್, ಎಂ. ರಾಮರಾವ್ ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರವಾಗಿದೆ ಎಂದರು.

ಹಿರಿಯ ಸಾಹಿತಿಗಳಾದ ಸಿದ್ದರಾಮ ಹೊನಕಲ್, ಶಿವಣ್ಣ ಇಜೇರಿ, ಸಣ್ಣನಿಂಗಣ್ಣ ನಾಯ್ಕೋಡಿ, ದೇವಿಂದ್ರಪ್ಪ ವಿಶ್ವಕರ್ಮ, ರಂಗನಾಥ ದೊರೆ, ಶಂಕರ ಹುಲಕಲ್, ನಿಂಗಣ್ಣ ತಿಪ್ಪನಟಗಿ ಹಾಗಾ ಪತ್ರಕರ್ತ ಪ್ರಕಾಶ್ ಸೇರಿದಂತೆ ಹಲವಾರು ಭಾಗವಹಿಸಿ ಕನ್ನಡಾಭಿಮಾನ ವ್ಯಕ್ತಪಡಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!